Thursday, October 26, 2017

No double ride please...!!!

ನೋಡಿ.. ಇವರೇನೇ ಮಾಡಲಿ.. ದುಡ್ಡಿನ ವಾಸನೆ ಮಾತ್ರ ಮೂಗಿಗೆ ಬಡಿಯುತ್ತೆ. ನೂರು ಸಿಸಿಕಿಂತ ಕಡಿಮೆ ಇರುವ ಗಾಡಿಗಳಲ್ಲಿ ಡಬಲ್ ಸವಾರಿ ಬೇಡವೇ ಬೇಡ ಅನ್ನುವ ಹಿಂದೆ ಒಂದು ದೊಡ್ಡ ಕಿಕ್ ಬ್ಯಾಕ್ ಇದ್ದೇ ಇರುತ್ತೆ. ಇವರು ಎರಡು ವಾರ ಮಾತ್ರ ಹೆಲ್ಮೆಟ್ ಕಡ್ಡಾಯ ಮಾಡಲಿಲ್ಲವೇ!?? ಹಾಗೇ...

ಸರಕಾರಿ ಗೋಧಾಮುಗಳಲ್ಲಿ ಟನ್'ಗಟ್ಟಲೇ ಗೋಧಿ ಕೊಳೆತು ಬಿದ್ದಿದೆ. ಯಾವ ಪಡಿತರ ಚೀಟಿಗೂ ಇವರು ಈ ಹಿಂದೆ ಗೋಧಿ ಕೊಟ್ಟಿಲ್ಲ. (ಯಾವ ಭಾಗ್ಯದ ಸ್ಕೀಮ್ ಅಲ್ಲೂ ಜನರಿಗೆ ಗೋಧಿ ಸಿಕ್ಕಿಲ್ಲ). ಹಾಗಾದರೆ ಪೋಗಸ್ತಾಗಿ ಶೇಖರಣೆ ಮಾಡಿದ್ದೇಕೇ!?? ಅದನ್ನು ಕೊಳೆಯೊದಕ್ಕೆ ಬಿಟ್ಟಿದ್ದೇಕೇ!?

ಒಂದು ಐಟಿ ರೈಡ್ ಆದರೆ ಬಾಯಿ ಬಾಯಿ ಬಡೆದು ಕೊಳ್ಳುವ ಈ 'ಸದಾ ಸಿದ್ಧ ಸರಕಾರ'ದ ನಾಯಕರ ಆರ್ತನಾದವ ನೀವು ಕೇಳಿಲ್ಲವೇ??

ಜಾತಿ ನೋಡಿ ಮೊಟ್ಟೆ ಕೊಡುವ, ಬಸ್ ಪಾಸ್ ಕೊಡುವ, ಲ್ಯಾಪ್ ಟಾಪ್ ಕೊಡುವ, ಗುಡ್ಡ ಹತ್ತುವ ಯುವಕರಿಗೆ 'ಟ್ರೇಕಿಂಗ್ ಕಿಟ್' ಕೊಡುವ, ಹಾಲು ಕರೆದು ಕೊಂಡು ಮಾರಲು ಬರುವ ರೈತರ ಜಾತಿ ನೋಡುವ, ಸರಕಾರಕ್ಕೊಂದು ಧಿಕ್ಕಾರ!!!!!

Wednesday, October 18, 2017

ಸಿಂಗೀತಂ ಶ್ರೀನಿವಾಸ್ ರಾವ್!!!

೧೯೭೦ ರಲ್ಲಿ ಅನಂತಮೂರ್ತಿ ತಮ್ಮದೇ ಒಂದು ಕಾದಂಬರಿಯನ್ನ ಸಿನಿಮಾ ಮಾಡಲೇಬೇಕು ಅಂತ ಅನಿಸಿದಾಗ ಪಟ್ಟಾಭಿರಾಮ್ ಒಂದು ಶ್ರೇಷ್ಠ ಅಯ್ಕೆ ಅಂತ ಅನ್ನಿಸಿತ್ತೋ, ಇಲ್ಲವೋ ಗೊತ್ತಿಲ್ಲ. "ಸಂಸ್ಕಾರ" ಅನ್ನುವ ಟಿಪಿಕಲ್ ಸಬ್ಜೆಕ್ಟ್ ಕೂಡ ಸಂಸ್ಕಾರವಂತರಿಂದಲೇ ಆಗಬೇಕು ಅನ್ನೊದು ಒಳಗುಟ್ಟು. ಚಿತ್ರಕಥೆಯ ಕಾರ್ಡ್ ಅಲ್ಲಿ ಕಾರ್ನಾಡರ ಹೆಸರು ಹೇಗೆ ಬಂತು ಅನ್ನೊದು ನನಗಿನ್ನೂ ಅನುಮಾನ. ಸ್ವತಃ ಮೂರ್ತಿಗೆ ಈ ವಿಷಯದಲ್ಲಿ, ತಮ್ಮ ಮೇಲೆ ತಮಗೇ ನಂಬಿಕೆ ಇರಲಿಲ್ಲ. ಅಲ್ಲಿ ಪಟ್ಟಾಭಿರಾಮ್ ಒಂದು ನೆಪ ಅಷ್ಟೆ. ಹಿಂದೆ ಇದ್ದಿದ್ದು ಸಿಂಗೀತಂ ಶ್ರೀನಿವಾಸ್ ರಾವ್.

ಇವತ್ತಿಗೂ ನಾನು ಇಷ್ಟಾತೀ ಇಷ್ಟ ಪಡುವ ಚಿತ್ರಕರ್ಮಿ ಈ ರಾವ್. ಅವರು ಒಬ್ಬ ಎಕ್ಸ್'ಪರಿಮೆಂಟಲ್ ವ್ಯಕ್ತಿ. ಆಂಧ್ರದ ಈ ವ್ಯಕ್ತಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಅವರ ರಾಜ್ಯದಲ್ಲಿ ಅದೆಷ್ಟೋ ಬಿರುದು, ಪ್ರಶಸ್ತಿ, ಪೋಷಾಕು ಸಿಕ್ಕರೂ ಕನ್ನಡಿಗರ ಚಪ್ಪಾಳೆ ಎಂದರೆ ಅವರಿಗೆ ದೀಪಾವಳಿಯ ಗುಲಾಬ್ ಜಾಮೂನು!! (ಈಗಿನ ರಾಜಮೌಳಿ ಥರ☺️). ಡಾ:ರಾಜಕುಮಾರ್ ಎಂಬ ಮೇರು ನಟನನ್ನ ಅವರು ಕಂಡ ಹಾಗೇ ಬಹುಶಃ ಯಾರೂ ಊಹೆ ಕೂಡ ಮಾಡಿಲ್ಲ ಅನ್ನಿಸುತ್ತೆ. ಹಾಲುಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರಗಳನ್ನ ಎಂದಿಗೂ ಔಟ್'ಡೇಟ್ ಕೂಡ ಆಗದ ಹಾಗೇ ನಿರ್ಮಿಸಿಬಿಟ್ಟರು.

ಸಿಂಗೀತಂ, ಎಂದಿಗೂ ಪೌರಾಣಿಕ ಚಿತ್ರಗಳಿಗೆ ಅಂಟಿಕೊಂಡವರಲ್ಲ. ಏನಿದ್ದರೂ ಪಕ್ಕಾ ಪ್ರಾಕ್ಟಿಕಲ್ ಸ್ಟೋರಿ. ಉತ್ಮಮ ಸಂಭಾಷಣೆಕಾರರಾಗಿಯೂ "ಪುಷ್ಪಕ ವಿಮಾನ" ಎಂಬ ಮೂಕಿ ಚಿತ್ರ ನಿರ್ಮಿಸಿ ಭೇಷ್ ಅನಿಸಿಕೊಂಡವರು. ರಾಜಕುಮಾರ್ ಜೊತೆಗೆ ಅವರ ಮೂರೂ ಮಕ್ಕಳ ಚಿತ್ರ ನಿರ್ದೇಶಿಸಿದ ಏಕೈಕ ವ್ಯಕ್ತಿ ಎಂದರೆ ಸಿಂಗೀತಂ ಶ್ರೀನಿವಾಸ್ ರಾವ್.

ಅಭೇರಿ, ಸಿಂಧು ಭೈರವಿ, ಕಾಫಿ, ಕಲ್ಯಾಣಿ, ಪಹಾಡ್ ರಾಗಗಳನ್ನು ಮನೆದೇವರಂತೆ ಪೂಜಿಸುತ್ತಿದ್ದ ಸಾಲೂರು ರಾಜೇಶ್ವರರಾವ್ ಅವರ ಅಭಿಮಾನಿ ಆಗಿದ್ದಕ್ಕೋ ಏನೋ, "ಇನ್ನೂ ಹತ್ತಿರ, ಹತ್ತಿರ ಬರುವೆಯಾ??" ಅಂತ ರೊಮ್ಯಾಂಟಿಕ್ ಸ್ಟೈಲ್ ಅಲ್ಲಿ ಹಾಡುಗಳನ್ನೂ ರಚಿಸುತ್ತಿದ್ದ ಭೂಪ! ಅವರನ್ನು ಇಷ್ಟಪಡಲು ಇನ್ನೂ ಒಂದು ಕಾರಣವಿದೆ. ನನ್ನ ಫೇವರಿಟ್ ಅಂದಕಾಲತ್ತಿಲ್ ಮಾಧವಿಯನ್ನ (😍) ಭಾಗ್ಯದ ಲಕ್ಷ್ಮಿ ಬಾರಮ್ಮ ಸಿನಿಮಾದಲ್ಲಿ ದಂತದ ಗೊಂಬೆಯಂತೆ ತೋರಿಸಿರುವ ಪರಿ!!

ಯಾವ ಕವಿಯೂ ಬರೆಯಲಾರ...
ಒಲವಿನಿಂದ...
ಕಣ್ಣೋಟದಿಂದ...
ಹೃದಯದಲ್ಲಿ ನೀನು ಬರೆದ ಈ ಪ್ರೇಮಗೀತೆಯ...
ಯಾವ ಕವಿಯೂ ಬರೆಯಲಾರ...!!!

Thursday, July 13, 2017

ಏಕ ರೂಪ ತೆರಿಗೆ ಓಕೆ.. ಟ್ರೋಲ್ ಯಾಕೆ!!?

ಜುಲೈ ೧ ರ ಆಚೆ, ಈಚೆ ಹದಿನೈದು ದಿನಗಳಾದವು. ಜಿ.ಎಸ್.ಟಿ ಮೇಲಿನ ಜೋಕುಗಳು, ಟ್ರೋಲ್'ಗಳು, ಖುದ್ದು ಮೋದಿ ಬಂದು ಇವರ ಮೈ ಮೇಲೆ ಬರೆ ಎಳೆದಿದಾನೇನೋ ಎಂಬಂತಹ ನಾಟಕಗಳು ಇನ್ನೂ ನಿಂತಿಲ್ಲ. ಜೊತೆಗೆ ತಿಂಡಿ ಊಟದ ಮೇಲೂ ಟ್ಯಾಕ್ಸ್ ಆಹ್.. ಎಂಬಂತಹ ವೀಡಿಯೊಗಳು..

ಈ ಮುಂಚೆ ಇದ್ದ ಎಲ್ಲಾ ತೆರಿಗೆ ನಿಯಮಗಳು ಇವರಿಗೆ ಗೊತ್ತಿತ್ತಾ.. ಇಲ್ಲ. ಆದರೂ ಇವರ ತೆವಲು ಇನ್ನೂ ನಿಂತಿಲ್ಲ.

ಹೌದು ಸ್ವಾಮಿ, ಪಂಚರ್ ಹಾಕುವ ಒಬ್ಬ ವ್ಯಕ್ತಿ ಎಂ.ಟಿ.ಆರ್ ಅಲ್ಲೋ, ಮಯ್ಯಾಸ್ ಅಲ್ಲೋ ₹65 ಕೊಟ್ಟು ದೋಸೆ ತಿಂದರೆ ಟ್ಯಾಕ್ಸ್ ಕಟ್ಟಬೇಕು.

ಯಾಕೆ ಅಂತಹ ವ್ಯಕ್ತಿ ದೋಸೆ ತಿನ್ನಬಾರದಾ ಎಂಬ ಶುದ್ಧ ತರಲೆ ಪ್ರಶ್ನೆ ಕೇಳಬೇಡಿ. ಅವನೇನು ಪ್ರತಿದಿನವೂ ತಿನ್ನಲ್ಲ. ಯಾರಾದರೂ ದುಡ್ಡು ಕೊಟ್ಟು ಹಿಂಗೆ ಮಾಡು ಅಂತ ಹೇಳಿದಾಗ ಮಾತ್ರ ಹಾಗೇ ಮಾಡಬಲ್ಲ.

ಏಕ ರೂಪ ತೆರಿಗೆ ಅನ್ನೋದೇ ಒಂದು ಸಿಂಪಲ್ ಆಗಿರೋ ಕಾನ್ಸೆಪ್ಟ್. ಅದರಲ್ಲಿ ಸುಮಾರು ಲಕ್ಷದಷ್ಟು ವಸ್ತುಗಳ, ಸೇವೆಗಳ ತೆರಿಗೆ ನೀತಿ ಇದೆ. ನೂರಾರು ಆರ್ಥಿಕ ತಜ್ಞರು, ಸಾವಿರಾರು ಗಂಟೆಗಳ ಮೀಟಿಂಗ್ ಮಾಡಿ, ಎಲ್ಲವನ್ನೂ ತುಂಬ ಕಷ್ಟಪಟ್ಟು, ಕಾಳಜಿಯಿಂದ ತಯಾರಿಸಿದ್ದಾರೆ. ಅದನ್ನೂ ಅಪಹಾಸ್ಯ ಮಾಡುವುದು ಅಕ್ಷರಶಃ ತಪ್ಪು.

ಇದೇ ಸರಕಾರ ಮುಂಚೆ ೦.೫% ಕೃಷಿ ಕಲ್ಯಾಣ ಸೆಸ್ ಹಾಕಿದಾಗ ಸುಮ್ಮನೇ ಕೂರದೆ ಅಪಹಾಸ್ಯ ಮಾಡಿದವರು, ಇನ್ನು ಏಕ ರೂಪ ತೆರಿಗೆಗೆ ಸುಮ್ಮನಿರುತ್ತಾರೇಯೇ!??

Thursday, March 23, 2017

ಮಾರ್ಚ್ ತಿಂಗಳ ಈ ಮೂರು ವಿಷಯಗಳು.

ತಾಂತ್ರಿಕ ಶಿಕ್ಷಣ ಪಧ್ಧತಿಯಲ್ಲಿರುವ ಪ್ರತಿಯೊಬ್ಬ ಉಪನ್ಯಾಸಕನಿಗೂ ಒಂದು ಕನಸು ಎಂದರೆ ಅದು ಪಿ ಎಚ್ ಡಿ ಮತ್ತು ಅದಕ್ಕೆ ಸಹಾಯಕ ಆಗುವ ಕೆಲವು ಸಣ್ಣ ವರ್ಕ್ ಶಾಪ್ ಗಳು ಹಾಗೂ ಕೆಲವು ಜಾಗತಿಕ ಗುರುತುಗಳು. ಇನ್ನೂ ಯುಗಾದಿ ಬಂದಿಲ್ಲ ಆದರೂ ಈ ತಿಂಗಳು ನನಗೆ ಹಬ್ಬ. ಆ ಹಬ್ಬಕ್ಕೆ ನನಗೆ ಇವೆ ಮೂರು ಕಾರಣಗಳು.

ಒಂದು ನನ್ನ ಅಡಿಯಲ್ಲಿ ಬಿ ಇ ಓದುವ ನಾಲ್ಕು ಹುಡುಗರು ಸೇರಿ ನಗರ ಪಟ್ಟಣಗಳಲ್ಲಿ ಉಪಯೋಗಿಸಿ ಬಿಸಾಕಿದ 40 ಮೈಕ್ರಾನ್ ಪ್ಲಾಸ್ಟಿಕ್ ಬ್ಯಾಗ್ ಅನ್ನು ಕರಿ ಡಾಂಬರು ಜೊತೆಗೆ ಕರಗಿಸಿ ಒಂದು ಸಣ್ಣ ರೋಡ್ ಮಾಡೆಲ್ ಮಾಡುವ ಪ್ರಯತ್ನ. ಕರ್ನಾಟಕ ಸರಕಾರ ಈ ಪ್ರಯತ್ನ ಗುರುತಿಸಿ 6500 ರುಪಾಯಿ ಅಷ್ಟು ಹಣ ಬಿಡುಗಡೆ ಮಾಡಿದೆ.

ಎರಡನೇಯದು, ಬರೆದು ಬಂದ ಪ್ರವೇಶ ಪರೀಕ್ಷೆಯಲ್ಲೂ ಪಾಸಾಗಿ, ಸಂದರ್ಶನದಲ್ಲೂ ಪಾಸಾಗಿ ಈಗ ನನ್ನ ಕೈ ಸೇರಿರುವ ವಿಶ್ವವಿದ್ಯಾಲಯಕ್ಕೆ ಪಿ ಎಚ್ ಡಿ ಗೆ ಪ್ರವೇಶ ಪಡೆಯುವ ಪತ್ರ.

ಮೂರನೇ ವಿಷಯದೇ ಒಂದು ವಿಶೇಷ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಲ್ಲಿ ಒಂದು ವಾರದ ಸುಮಾರು ಹತ್ತು ಸಾವಿರ ಬೆಲೆ ಬಾಳುವ ವರ್ಕ್ ಶಾಪ್. ಅದೂ ಸಂಪೂರ್ಣ ಉಚಿತ.

ಇದೇ ಮೂರು ಕಾರಣಗಳು ನನ್ನ ಈ ಬರಹಕ್ಕೆ. ಅಷ್ಟೇ.

Tuesday, December 27, 2016

ದೇವರೇ song from Hebbuli

ದೇವರೇ... ನೀನೂ.. ಇರೋ ವಿಳಾಸವು ಬೇಕಾಗಿದೆ...
ಆಗಿರೋ ಅನ್ಯಾಯಕೆ ದೂರೊಂದನೂ ನೀಡೋದಿದೆ...
ಆಧಾರದ ದಾರ ಈಗ ದೂರ...
ಕಾರಣವು ಯಾರೋ ಸೂತ್ರಧಾರ...!?

ದೇವರೇ... ನೀನೆ ಬಾ... ಕಾರಣ.. ನೀಡು ಬಾ..
ದೇವರೇ... ಬೇಗ ಬಾ... ಉತ್ತರ ನೀಡು ಬಾ...

ದೇವರೇ... ನೀನೂ.. ಇರೋ ವಿಳಾಸವು ಬೇಕಾಗಿದೆ...

ಕಾಯಲು ಹೋದೆನು ನಿನ್ನನು ನಂಬಿ ದೇಶವ...
ಕಾಯದೇ ಸೋತೆಯಾ ನನಗೆ ಬೇಕಾದ ಒಂದು ಜೀವವಾ!?
ಮರಳಲ್ಲಿ ನನಗೆ ನಾ... ಗುಡೊಂದು ಕಟ್ಟಿದೆ...
ಮಳೆ ತಂದು ಅಳಿಸಿ ನೀ.. ಮರೆಯಾಗಿ ಓಡಿದೆ...

ಈ ಮೋಸಕೆ ನೀನೇ ಹೊಣೆ...
ಇಗಾಗಲಿ ವಿಚಾರಣೆ...

ದೇವರೇ... ನೀನೆ ಬಾ... ಕಾರಣ.. ನೀಡು ಬಾ..
ದೇವರೇ... ಬೇಗ ಬಾ... ಉತ್ತರ.. ನೀಡು ಬಾ...

ದೇವರೇ.. ನೀನೂ ಇರೋ ವಿಳಾಸವು ಬೇಕಾಗಿದೆ...




Thursday, November 17, 2016

ಭಕ್ತ ಕನಕದಾಸರ ನೆನೆಯುತ್ತ...

ನಾನು ಹೋದರೆ ಹೋದೆನು...

ಭಕ್ತ ಕನಕದಾಸರು ಬದುಕಿದ್ದು ಭರ್ತಿ ನೂರು ವರ್ಷ (೧೫೦೯-೧೬೦೯). ಬಚ್ಚೇಗೌಡ ಮತ್ತು ಬೀರಮ್ಮ ದಂಪತಿಗಳಿಗೆ ಜನಿಸಿದವರು. ಶ್ರೀ ಪುರಂದರದಾಸರದು ಒಂದು ಹಟ. ಅಳಿಯುವ ಮುನ್ನ ಟಿಪಿಕಲ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀಹರಿಯ ಸುಮಾರು ಐದು ಲಕ್ಷ ಕೀರ್ತನೆಗಳನ್ನು ರಚಿಸಲೇಬೇಕು ಎನ್ನುವುದು. ಅಂತಹ ಪಣ ತೊಟ್ಟವರು ಹೋಗುವ ಮುನ್ನ ಕೇವಲ(?) ನಾಲ್ಕು ಲಕ್ಷ ಎಪ್ಪತೈದು ಸಾವಿರ ಹಾಡುಗಳನ್ನು ರಚಿಸಿ ಬಿಟ್ಟು ಹೋದರು. ಉಳಿದ ಇಪ್ಪತೈದು ಸಾವಿರ ಬಿಡಿ, ನಮ್ಮ ಊಹೆಗೂ ನಿಲುಕದೇ ಸಾಗರೋಪಾದಿಯಲ್ಲಿ ಹಾಡುಗಳು ಬಂದಿದ್ದು ನಮ್ಮ ಜಿಲ್ಲೆ ಅವರೇ ಆದ ಶ್ರೀ ಭಕ್ತ ಕನಕದಾಸರಿಂದ.

ಇಲ್ಲೇ ಇದ್ದವರು ಹೀಗೂ ಮಾಡಿದರೇ..!? ಯೆಸ್. ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯ ಮಿಂಚಿದ್ದೇ ನಮ್ಮ ಕನ್ನಡ ದಾಸಕೀರ್ತನೆಗಳಿಂದ.

ಅವರ ಜಯಂತಿಯಂದು ಅವರದೇ ಹಾಡು..

ಈ ಲಿಂಕ್ ಅಲ್ಲಿ..

https://youtu.be/oiOMd1EgmO0

Wednesday, November 16, 2016

ಅದು ಯಾವಾಗ ಮೈಯೊಳಗೆ ಲಗ್ಗೆ ಹಾಕಿತೋ...??

ಓದು...

ಇದೊಂದು ನನ್ನ ಪರಮ ಮಿತ್ರ. ತೀರ ನಾನೇನು ಸಾಹಿತ್ಯದ ಗೀಳು ಅಂಟಿಸಿಕೊಂಡ ಮನುಷ್ಯನಲ್ಲ. ದಿನಪತ್ರಿಕೆಯ ಅಂಕಣಗಳು, ಬೆರಳೆಣಿಕೆ ಅಷ್ಟು ಕಾದಂಬರಿಗಳು ಹಾಗೂ ಇತ್ತಿಚೆಗೆ ಆರಂಭವಾದ ಎಲೆಕ್ಟ್ರಾನಿಕ್ ಮಾಧ್ಯಮದ ಬರಹಗಳನಷ್ಟೇ ಕರಗಿಸಿಕೊಳ್ಳಬಲ್ಲ ಒಬ್ಬ ಪ್ರೋಫೆಸರ್. ಹೈಸ್ಕೂಲು ದಿನಗಳಿಂದಲೇ ಪ್ರಾರಂಭವಾದ ಈ ಚಟ ಮೊದಮೊದಲು ಕೇವಲ ಪತ್ರಿಕೆ ಸುದ್ದಿಯ ಅನ್ವೇಷಣೆಯ ಕಡೆಗೆ ಇತ್ತು. ನಂತರ ಆಗಿದ್ದು ವಿಜಯ ಕರ್ನಾಟಕ ಎಂಬ ಹೆಸರಿನ ಪತ್ರಿಕೆಯ ಕೈ ಚಳಕ. ಅಸಲಿಗೆ ಅಂಕಣದ ಹುಚ್ಚು ಹತ್ತಿಸಿದ್ದೇ ನನಗೆ ಆ ಪತ್ರಿಕೆ. ಅದಕ್ಕೂ ಮುಂಚೆ ಪ್ರಜಾವಾಣಿ ಓದುತ್ತಿದ್ದನಾದರೂ ಅಂಕಣಗಳ ಗೋಜಿಗೆ ಹೋದವನಲ್ಲ. ಶುದ್ಧ ಸುದ್ದಿ ಅಷ್ಟೇ. ನನ್ನ ಪುಣ್ಯ. ಹೋಗಿದ್ದಿದ್ದರೆ ಆ ಸಮಯದಲ್ಲಿ ನ್ಯೂಟ್ರಲ್ ಆಗಿದ್ದ ನನ್ನಲ್ಲಿ ಎಡಪಂಥೀಯ ವಿಚಾರಧಾರೆ ಮೊಳಕೆ ಒಡೆದು ಈ ಹೊತ್ತಿಗಾಗಲೇ ಹೆಮ್ಮರವಾಗುತ್ತಿತ್ತು. ಇರಲಿ. ನಂತರ ಶುರುವಾಯಿತು. ಬೆತ್ತಲೆ ಜಗತ್ತು, ನೂರೆಂಟು ಮಾತು, ಜನಗಳ ಮನ, ಸೂರ್ಯ ಶಿಕಾರಿ,   ಪರಾಗ ಸ್ಪರ್ಶ, ಒಳಸುಳಿ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಲ್ಲ ಅಂಕಣಗಾರರಿಗೂ ನಾನು ಆಭಾರಿ.

ಪ್ರಚಲಿತ ವಿದ್ಯಮಾನಗಳ ವಿಷಯದಲ್ಲಿ ಆಸಕ್ತಿ ಇತ್ತಾದರೂ ಚರ್ಚೆ ಅಷ್ಟಕಷ್ಟೇ. ಕೇವಲ ಮನುಷ್ಯನ ಸಂಬಂಧಗಳು, ಭಾವನೆ, ಪ್ರೀತಿ ಪ್ರಣಯದ ಸಲ್ಲಾಪಗಳು, ಜೀವನದ ಮೌಲ್ಯಗಳು, ಸಮಾಜದಲ್ಲಿ ನಮ್ಮ ಜವಾಬ್ದಾರಿ, ಇನ್ನೊಬ್ಬರಿಗೆ ತೊಂದರೆ ಆಗದಂತೆ ಬದುಕುವ ಕಲೆ, ನಮ್ಮ ದೇಶ, ಪರಂಪರೆ, ಸಂಸ್ಕೃತಿ, ಧರ್ಮ, ಸ್ವಚ್ಛತೆ, ದಿನ ನಿತ್ಯದ ಕೆಲಸಗಳಲ್ಲಿ ಶಿಸ್ತು, ಒಡಹುಟ್ಟಿದವರೊಡನೆ ಇರುವ ಬಗೆ, ತಂದೆ ತಾಯಿಗಳಿಗೆ ಗೌರವ ಕೊಡುವುದು ಹೇಗೆ ಬರೀ ಇಂತಹ ವಿಷಯಗಳಿಗೆ ಸಂಭದಿಸಿದ ಬರಹಗಳನ್ನು ತುಂಬ ಇಷ್ಟ ಪಡುತ್ತಿದ್ದೆ.

ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ, ಶ್ರೀವತ್ಸ ಜೋಶಿ, ನಾಗತಿಹಳ್ಳಿ ಚಂದ್ರಶೇಖರ್, ಪಿ ತ್ಯಾಗರಾಜ್, ಚೈತನ್ಯ ಹೆಗಡೆ, ಓಶೋನ ಬರಹಗಳನ್ನು ಯಾವತ್ತೂ ಮಿಸ್ ಮಾಡುತ್ತೀರಲಿಲ್ಲ. ಅವರೂ ಅಷ್ಟೇ ನನ್ನ ಓದಿನ ಹಸಿವನ್ನು ತುಂಬಿಸಲೇ ಬರಯುತ್ತಿದ್ದಾರೋ ಅನಿಸುತ್ತಿತ್ತು. ಸುಮಾರು ಎಳೆಂಟು ವರ್ಷಗಳ ಅವಿನಾಭಾವ ಸಂಬಂಧ.

(ಇನ್ನೂ ಇದೆ)