Monday, October 30, 2017

ಸಾವು...

ನರಮನುಷ್ಯ ಅತೀ ಭಯ ಪಡುವ, ಅಧೀರನಾಗುವ, ಪತುರುಗುಟ್ಟಿಹೋಗುವ ಸಮಯ ಅಂದರೆ ಅದು ಸಾವು.. ಅದು ಅವನದೇ ಸಾವಲ್ಲ.. ಅವನದೇ ಸಾವನ್ನ ಸ್ವತಃ ಅವನು ಊಹೆ ಕೂಡ ಮಾಡಿರುವುದಿಲ್ಲ. ಅಲ್ಲಿ ಜೊತೆಗೇ ಸಾಯುವ ಇನ್ನೊಂದು ಅಂದರೆ, ಆ ದೇಹವನ್ನ, ಜೀವವನ್ನ ನಂಬಿರುವ, ಪ್ರೀತಿಸಿರುವ, ಆಧಾರವಾಗಿ ಇಟ್ಟುಕೊಂಡಿರುವ ಇನ್ನೊಂದು ಜೀವ ಹಾಗೂ ಜೀವಗಳು.

ತಂದೆ ಸತ್ತರೆ ಹೆಂಡತಿ ಮತ್ತು ಮಕ್ಕಳು! ತಾಯಿ ಸತ್ತರೆ, ಮಕ್ಕಳು ಮತ್ತು ಗಂಡ! ಮಕ್ಕಳು ಸತ್ತರೆ ಅಪ್ಪ ಮತ್ತು ಅಮ್ಮ! ಹೀಗೆಯೇ.. ಪಟ್ಟಿ ಮಾಡುತ್ತಾ ಹೋದರೆ ಸಾವು ಎಲ್ಲರನ್ನೂ ಕಾಡುತ್ತದೆ. ಸಾವನ್ನು ನಮ್ಮ ಸ್ಮೃತಿಪಟಲದಿಂದ ದೂರ ಮಾಡುವ ಶಕ್ತಿ ಇರುವುದು ಸಮಯಕ್ಕೊಂದೆ.

ಆ ಸಾವನ್ನ ಕುಟುಂಬ, ದುಡ್ಡು, ಅಧಿಕಾರ, ಜನಬೆಂಬಲ.. ಊಹೂಂ.. ಯಾವುದರರಿಂದಲೂ ತಡೆಯಲು ಅಸಾಧ್ಯ. ಯಾವ ರಾಜನನ್ನೂ, ಯಾವ ಧಣಿಯನ್ನೂ ಸಾವು ಬಿಟ್ಟಿಲ್ಲ.

ನಾವು ನಂಬಿರುವ, ಪ್ರೀತಿಸಿರುವ ಎಲ್ಲರ ಸಾವಿಗೂ ನಾವು ಮುಂಚೆಯೇ ಅಣಿಯಾಗಿರಬೇಕು. ನಮ್ಮ ಸಾವನ್ನೂ ಕೂಡ ನಮ್ಮನ್ನು ನಂಬಿರುವವರು ನೋಡಿ ಕೈಕಟ್ಟಿ ಕೂರದ ಹಾಗೇ ನಾವು ಬೆಳೆದಿರಬೇಕು.

ನಮ್ಮ ಎರಡೂ ಕೈಯಿಂದ ಸಾವನ್ನ ಸ್ವಾಗತಿಸುವ 'ಶಕ್ತಿ' ಎಲ್ಲರಿಗೂ ಇರಲೇಬೇಕು...

Thursday, October 26, 2017

No double ride please...!!!

ನೋಡಿ.. ಇವರೇನೇ ಮಾಡಲಿ.. ದುಡ್ಡಿನ ವಾಸನೆ ಮಾತ್ರ ಮೂಗಿಗೆ ಬಡಿಯುತ್ತೆ. ನೂರು ಸಿಸಿಕಿಂತ ಕಡಿಮೆ ಇರುವ ಗಾಡಿಗಳಲ್ಲಿ ಡಬಲ್ ಸವಾರಿ ಬೇಡವೇ ಬೇಡ ಅನ್ನುವ ಹಿಂದೆ ಒಂದು ದೊಡ್ಡ ಕಿಕ್ ಬ್ಯಾಕ್ ಇದ್ದೇ ಇರುತ್ತೆ. ಇವರು ಎರಡು ವಾರ ಮಾತ್ರ ಹೆಲ್ಮೆಟ್ ಕಡ್ಡಾಯ ಮಾಡಲಿಲ್ಲವೇ!?? ಹಾಗೇ...

ಸರಕಾರಿ ಗೋಧಾಮುಗಳಲ್ಲಿ ಟನ್'ಗಟ್ಟಲೇ ಗೋಧಿ ಕೊಳೆತು ಬಿದ್ದಿದೆ. ಯಾವ ಪಡಿತರ ಚೀಟಿಗೂ ಇವರು ಈ ಹಿಂದೆ ಗೋಧಿ ಕೊಟ್ಟಿಲ್ಲ. (ಯಾವ ಭಾಗ್ಯದ ಸ್ಕೀಮ್ ಅಲ್ಲೂ ಜನರಿಗೆ ಗೋಧಿ ಸಿಕ್ಕಿಲ್ಲ). ಹಾಗಾದರೆ ಪೋಗಸ್ತಾಗಿ ಶೇಖರಣೆ ಮಾಡಿದ್ದೇಕೇ!?? ಅದನ್ನು ಕೊಳೆಯೊದಕ್ಕೆ ಬಿಟ್ಟಿದ್ದೇಕೇ!?

ಒಂದು ಐಟಿ ರೈಡ್ ಆದರೆ ಬಾಯಿ ಬಾಯಿ ಬಡೆದು ಕೊಳ್ಳುವ ಈ 'ಸದಾ ಸಿದ್ಧ ಸರಕಾರ'ದ ನಾಯಕರ ಆರ್ತನಾದವ ನೀವು ಕೇಳಿಲ್ಲವೇ??

ಜಾತಿ ನೋಡಿ ಮೊಟ್ಟೆ ಕೊಡುವ, ಬಸ್ ಪಾಸ್ ಕೊಡುವ, ಲ್ಯಾಪ್ ಟಾಪ್ ಕೊಡುವ, ಗುಡ್ಡ ಹತ್ತುವ ಯುವಕರಿಗೆ 'ಟ್ರೇಕಿಂಗ್ ಕಿಟ್' ಕೊಡುವ, ಹಾಲು ಕರೆದು ಕೊಂಡು ಮಾರಲು ಬರುವ ರೈತರ ಜಾತಿ ನೋಡುವ, ಸರಕಾರಕ್ಕೊಂದು ಧಿಕ್ಕಾರ!!!!!

Wednesday, October 18, 2017

ಸಿಂಗೀತಂ ಶ್ರೀನಿವಾಸ್ ರಾವ್!!!

೧೯೭೦ ರಲ್ಲಿ ಅನಂತಮೂರ್ತಿ ತಮ್ಮದೇ ಒಂದು ಕಾದಂಬರಿಯನ್ನ ಸಿನಿಮಾ ಮಾಡಲೇಬೇಕು ಅಂತ ಅನಿಸಿದಾಗ ಪಟ್ಟಾಭಿರಾಮ್ ಒಂದು ಶ್ರೇಷ್ಠ ಅಯ್ಕೆ ಅಂತ ಅನ್ನಿಸಿತ್ತೋ, ಇಲ್ಲವೋ ಗೊತ್ತಿಲ್ಲ. "ಸಂಸ್ಕಾರ" ಅನ್ನುವ ಟಿಪಿಕಲ್ ಸಬ್ಜೆಕ್ಟ್ ಕೂಡ ಸಂಸ್ಕಾರವಂತರಿಂದಲೇ ಆಗಬೇಕು ಅನ್ನೊದು ಒಳಗುಟ್ಟು. ಚಿತ್ರಕಥೆಯ ಕಾರ್ಡ್ ಅಲ್ಲಿ ಕಾರ್ನಾಡರ ಹೆಸರು ಹೇಗೆ ಬಂತು ಅನ್ನೊದು ನನಗಿನ್ನೂ ಅನುಮಾನ. ಸ್ವತಃ ಮೂರ್ತಿಗೆ ಈ ವಿಷಯದಲ್ಲಿ, ತಮ್ಮ ಮೇಲೆ ತಮಗೇ ನಂಬಿಕೆ ಇರಲಿಲ್ಲ. ಅಲ್ಲಿ ಪಟ್ಟಾಭಿರಾಮ್ ಒಂದು ನೆಪ ಅಷ್ಟೆ. ಹಿಂದೆ ಇದ್ದಿದ್ದು ಸಿಂಗೀತಂ ಶ್ರೀನಿವಾಸ್ ರಾವ್.

ಇವತ್ತಿಗೂ ನಾನು ಇಷ್ಟಾತೀ ಇಷ್ಟ ಪಡುವ ಚಿತ್ರಕರ್ಮಿ ಈ ರಾವ್. ಅವರು ಒಬ್ಬ ಎಕ್ಸ್'ಪರಿಮೆಂಟಲ್ ವ್ಯಕ್ತಿ. ಆಂಧ್ರದ ಈ ವ್ಯಕ್ತಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಅವರ ರಾಜ್ಯದಲ್ಲಿ ಅದೆಷ್ಟೋ ಬಿರುದು, ಪ್ರಶಸ್ತಿ, ಪೋಷಾಕು ಸಿಕ್ಕರೂ ಕನ್ನಡಿಗರ ಚಪ್ಪಾಳೆ ಎಂದರೆ ಅವರಿಗೆ ದೀಪಾವಳಿಯ ಗುಲಾಬ್ ಜಾಮೂನು!! (ಈಗಿನ ರಾಜಮೌಳಿ ಥರ☺️). ಡಾ:ರಾಜಕುಮಾರ್ ಎಂಬ ಮೇರು ನಟನನ್ನ ಅವರು ಕಂಡ ಹಾಗೇ ಬಹುಶಃ ಯಾರೂ ಊಹೆ ಕೂಡ ಮಾಡಿಲ್ಲ ಅನ್ನಿಸುತ್ತೆ. ಹಾಲುಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರಗಳನ್ನ ಎಂದಿಗೂ ಔಟ್'ಡೇಟ್ ಕೂಡ ಆಗದ ಹಾಗೇ ನಿರ್ಮಿಸಿಬಿಟ್ಟರು.

ಸಿಂಗೀತಂ, ಎಂದಿಗೂ ಪೌರಾಣಿಕ ಚಿತ್ರಗಳಿಗೆ ಅಂಟಿಕೊಂಡವರಲ್ಲ. ಏನಿದ್ದರೂ ಪಕ್ಕಾ ಪ್ರಾಕ್ಟಿಕಲ್ ಸ್ಟೋರಿ. ಉತ್ಮಮ ಸಂಭಾಷಣೆಕಾರರಾಗಿಯೂ "ಪುಷ್ಪಕ ವಿಮಾನ" ಎಂಬ ಮೂಕಿ ಚಿತ್ರ ನಿರ್ಮಿಸಿ ಭೇಷ್ ಅನಿಸಿಕೊಂಡವರು. ರಾಜಕುಮಾರ್ ಜೊತೆಗೆ ಅವರ ಮೂರೂ ಮಕ್ಕಳ ಚಿತ್ರ ನಿರ್ದೇಶಿಸಿದ ಏಕೈಕ ವ್ಯಕ್ತಿ ಎಂದರೆ ಸಿಂಗೀತಂ ಶ್ರೀನಿವಾಸ್ ರಾವ್.

ಅಭೇರಿ, ಸಿಂಧು ಭೈರವಿ, ಕಾಫಿ, ಕಲ್ಯಾಣಿ, ಪಹಾಡ್ ರಾಗಗಳನ್ನು ಮನೆದೇವರಂತೆ ಪೂಜಿಸುತ್ತಿದ್ದ ಸಾಲೂರು ರಾಜೇಶ್ವರರಾವ್ ಅವರ ಅಭಿಮಾನಿ ಆಗಿದ್ದಕ್ಕೋ ಏನೋ, "ಇನ್ನೂ ಹತ್ತಿರ, ಹತ್ತಿರ ಬರುವೆಯಾ??" ಅಂತ ರೊಮ್ಯಾಂಟಿಕ್ ಸ್ಟೈಲ್ ಅಲ್ಲಿ ಹಾಡುಗಳನ್ನೂ ರಚಿಸುತ್ತಿದ್ದ ಭೂಪ! ಅವರನ್ನು ಇಷ್ಟಪಡಲು ಇನ್ನೂ ಒಂದು ಕಾರಣವಿದೆ. ನನ್ನ ಫೇವರಿಟ್ ಅಂದಕಾಲತ್ತಿಲ್ ಮಾಧವಿಯನ್ನ (😍) ಭಾಗ್ಯದ ಲಕ್ಷ್ಮಿ ಬಾರಮ್ಮ ಸಿನಿಮಾದಲ್ಲಿ ದಂತದ ಗೊಂಬೆಯಂತೆ ತೋರಿಸಿರುವ ಪರಿ!!

ಯಾವ ಕವಿಯೂ ಬರೆಯಲಾರ...
ಒಲವಿನಿಂದ...
ಕಣ್ಣೋಟದಿಂದ...
ಹೃದಯದಲ್ಲಿ ನೀನು ಬರೆದ ಈ ಪ್ರೇಮಗೀತೆಯ...
ಯಾವ ಕವಿಯೂ ಬರೆಯಲಾರ...!!!