Thursday, April 18, 2013

ಸಾವು - ಸಾವನ್ನು ಅಳಿಸಿಬಿಡೋದು ಸಾವಲ್ಲ, ನೋವು

ಆವತ್ತು ಬೆಳಗ್ಗೆ ಮನೆ ಮುಂದೆ
ಜನ.
ನೋಡಲಿಕ್ಕೆಂದು ನನ್ನ
ಸತ್ತ ಹೆಣ.
ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿ
ಹಲವರಿಗೆ ಸಾಯದಿದ್ದರೂ
ಪ್ರಾಣ ಹೋಗಿರಲಿಕ್ಕೆ ಸಾಕು ಎಂಬ
ಖಾತ್ರಿ.

ಸಾಯೋ ವಯಸ್ಸಲ್ಲ
ಇನ್ನು ಸಾಧಿಸೋದಿತ್ತು
ದುರಭ್ಯಾಸಗಳಿದ್ದವು, ಯಾರಿಗಿಲ್ಲ ಬಿಡಿ.
ಕಾಯಿಲೆ ಇತ್ತಂತೆ ಹೌದೇ?
ಮನೆ ಕಡೆ ಚೆನ್ನಾಗಿರಬೇಕಲ್ಲ?
ನಿನ್ನೆ ಬೆಳಗ್ಗೆ ಮಾತಾಡಿದ್ದೆ ಕಣ್ರೀ
ಮನುಷ್ಯ ಹೀಗೇಂತ ಹೇಳಕ್ಕಾಗಲ್ಲ!
ಹೀಗೆ ಆಡಬೇಕಾದ ಮಾತುಗಳನ್ನು ಮಥಿಸಿ
ಕೂಡಿಸಿ ಭಾಗಿಸಿ ಗುಣಿಸಿ
ಅವನ್ನೆಲ್ಲ ನಾಲಗೆ ಕರವಸ್ತ್ರದಲ್ಲಿ ಮಡಿಸಿಟ್ಟುಕೊಂಡು
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ.

ಸಾಯುವುದು ಇಷ್ಟೆಲ್ಲ ಸಂಭ್ರಮ
ಅಂತ ಗೊತ್ತಿರಲೇ ಇಲ್ಲ.
ಜೀವ ನೀನು ಅಂತ ತಬ್ಬಿ ಪ್ರೇಮಿಸಿದ
ಅವಳು ಕೈ ಕೊಟ್ಟಾಗ ಸತ್ತಿದ್ದೆ.
ನಾನು ಬರೆದ ಕವಿತೆಯನ್ನು
ನಾನೇ ಹರಿಯುತ್ತಾ ಸತ್ತಿದ್ದೆ.
ಬದುಕೋದು ಕಲೀರಿ ಅಂತ
ಸಂಪಾದಕರು ಗದರಿದಾಗ ಸತ್ತಿದ್ದೆ.
ನಿಮಗೆ ತಾತ್ವಿಕ ಬದ್ಧತೆ ಇಲ್ಲ
ಅಂದಾಗೊಮ್ಮೆ ಸತ್ತಿದ್ದೆ.
ಕೆಳಗಿದ್ದವರು ನಕ್ಕಾಗ, ಮೇಲಿದ್ದವರು ಮೊಟಕಿದಾಗ
ನಾನು ಮೇಲೂ ಇಲ್ಲ ಕೆಳಗೂ ಇಲ್ಲ ಎಂದು ಗೊತ್ತಾದಾಗ
ನನ್ನ ಮನೆ ದಾರಿ ಮರೆತಾಗ
ಅವಳ ಮನೆಯಲ್ಲಿ ಚಪ್ಪರ ಎದ್ದಾಗ
ಶ್ರೀರಾಮ ವಾಲಿಯನ್ನು ಮೋಸದಿಂದ ಕೊಂದಿದ್ದು ಗೊತ್ತಾದಾಗ
ಅಶ್ವತ್ಥಾಮ ಹೆಸರಿನ ಆನೆ ಸತ್ತಿದ್ದು
ಅಂತ ಕೃಷ್ಣ ಪಿಸುಗುಟ್ಟಿದಾಗ
ಭಗವದ್ಗೀತೆ ನಿನಗೆ ಕಡ್ಡಾಯ ಎಂದಾಗ
ಪದೇ ಪದೇ ಸತ್ತಿದ್ದೆ.
ಯಾರೂ ಸಂಭ್ರಮಿಸಿರಲಿಲ್ಲ.

ನೆತ್ತಿಯಲ್ಲಿ ಮೊದಲ ಬಿಳಿಕೂದಲು ಕಂಡಾಗ
ಅಕ್ಷರ ಮಸುಕಾದಾಗ
ಕವಿತೆ ಅರ್ಥವಾಗದೇ ಛೇಡಿಸಿದಾಗ
ಕೆನ್ ಯೂ ಸ್ಪೀಕ್ ಇನ್ ಇಂಗ್ಲಿಷ್ ಅಂತ
ಮಂಡ್ಯದ ಮೇಷ್ಟ್ರು ಕೇಳಿದಾಗ
ಸಿನಿಮಾ ಸಲೀಸು ಅಂತ ನಿರ್ದೇಶಕ ನಕ್ಕಾಗ
ವೋಲೆ ಸೋಯಿಂಕಾ? ಯಾರದು?
ಅಂತ ಗೆಳತಿ ಕೇಳಿದಾಗ
ಮತ್ತೆ ಮತ್ತೆ ಸತ್ತಿದ್ದೆ.

ಸಾವು ನಿಗೂಢ.
ನಾವು ಸಾಯುವುದು ಯಾರಿಗೂ ಗೊತ್ತೇ ಆಗುವುದಿಲ್ಲ.
ಅದು ಎಲ್ಲರಿಗೂ ತಿಳಿದಾಗ
ನಮಗೆ ಅರಿವೇ ಆಗುವುದಿಲ್ಲ.
ನಮ್ಮ ಸಾವು ನಮ್ಮದು
ಅವರ ಸಾವು ನಮ್ಮದು

ಎರಡೂ ಒಂದೇ ಆದರೆ
ಅವನು ಮಹಾತ್ಮ
ಕವಿ
ಅಥವಾ
ಮನುಕುಲದ ಶತ್ರು.

Monday, February 25, 2013

ಮಿಡತೆಯ ಕೂಗಿಗೆ ಓಗೊಡುತ್ತಾ!!!

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಓದಿದ ಹಳೇ ಕತೆಯ ಹೊಸ ಅವತರಣಿಕೆ ವಿಚಿತ್ರ ಕಚಗುಳಿ ನೀಡಿತು. ಆ ಖುಷಿ ನಿಮಗೂ ಇರಲಿ ಎಂದು...

ಹೀಗೊಂದು ಹಳೆ ಕತೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳಿದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಹೈರಾಣಾಗಿ ಸತ್ತುಹೋಯಿತು.
ಒಂದು ವೇಳೆ ಇದು ಭಾರತದಲ್ಲಿ ನಡೆದಿದ್ದರೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು, ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳೆದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಕಂಗಾಲಾಗಿ ಇನ್ನೇನು ಸಾಯುವುದರಲ್ಲಿತ್ತು...ಅಷ್ಟರಲ್ಲಿ ಅದು ಸುದ್ದಿ ವಾಹಿನಿಗಳ ಕಣ್ಣಿಗೆ ಬಿದ್ದುಬಿಟ್ಟಿತು!
ಮಿಡತೆ ಚಳಿಯಿಂದ ಸಾಯುತ್ತಿದ್ದರೂ, ಆರಾಮಾಗಿ ಗೊರಕೆ ಹೊಡೆಯುತ್ತಿದ್ದ ಇರುವೆಯ ವೀಡಿಯೋವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದವು . ಪ್ರಪಂಚದಾದ್ಯಂತ ಈ ವಿಡಿಯೋ ಹರಿದಾಡಿ ಮಿಡತೆಯ ಪರಿಸ್ಥಿತಿಗೆ ಎಲ್ಲರೂ ಮರುಗಿದರು. ಅಂತಹ ನೀಚ ಇರುವೆಯನ್ನು ದೇಶದಲ್ಲಿ ಇರಲೂ ಬಿಡಬಾರದು ಎಂಬ ಆರ್ಭಟ ಎಲ್ಲೆಡೆಯೂ ಮಾರ್ದನಿಸತೊಡಗಿತು.
ಇರುವೆಯ ಮನೆಯ ಮುಂದೆ ಅರುಂಧತಿ ರಾಯ್ ಧರಣಿ ಕೂತಳು. ಮೇಧಾ ಪಾಟ್ಕರ್ ಮಿಡತೆಗಳ ನೇತೃತ್ವ ವಹಿಸಿ, 'ಎಲ್ಲಾ ಮಿಡತೆಗಳನ್ನೂ ಚಳಿಗಾಲದಲ್ಲಿ ಬೆಚ್ಚಗಿನ ಜಾಗಕ್ಕೆ ಸ್ಥಳಾಂತರಿಸಬೇಕು' ಎಂದು ಉಪವಾಸ ಕುಳಿತಳು. 'ಇದು ಮೈನಾರಿಟಿಗಳಿಗೆ ಮಾಡಿದ ಅನ್ಯಾಯ' ಎಂದು ಮಾಯಾವತಿ ಆರ್ಭಟಿಸಿದ್ದೂ ಆಯಿತು.
ಆ ಮಿಡತೆಯ ಮೂಲಭೂತ ಹಕ್ಕನ್ನು ಕಾಪಾಡುವಲ್ಲಿ ವಿಫಲವಾದ ಭಾರತ ಸರ್ಕಾರಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಷ್‌ನಲ್ ಹಿಗ್ಗಾ ಮುಗ್ಗಾ ಛೀಮಾರಿ ಹಾಕಿತು. ಮಿಡತೆಗೆ ಬೆಂಬಲ ನೀಡಬೇಕು ಎಂದು ಅಂತರ್ಜಾಲದಲ್ಲಿ ಆನ್‌ಲೈನ್ ಪಿಟೀಷನ್‌ಗಳು ಹರಿದಾಡತೊಡಗಿದವು (ಇದಕ್ಕೆ ಬೆಂಬಲ ನೀಡಿದರೆ ದೇವರು ನಿಮಗೆ ಸ್ವರ್ಗ ಪ್ರಾಪ್ತಿ ಮಾಡುತ್ತಾನೆ ಎನ್ನುವ ತಲೆಬರಹದಲ್ಲೂ ಕೆಲವು ಪಿಟೀಷನ್‌ಗಳು ಕಾಣಿಸಿಕೊಂಡವು).
ವಿರೋಧ ಪಕ್ಷಗಳ ಎಂಪಿಗಳು ಮಿಡತೆಯ ಮೇಲಾದ ಅನ್ಯಾಯವನ್ನು ಸಹಿಸಲಾರದೆ ಸಭಾತ್ಯಾಗ ಮಾಡಿದರು. ಪಶ್ಚಿಮ ಬಂಗಾಳದ ಎಡಪಕ್ಷಗಳು 'ಬಂಗಾಳ ಬಂದ್‌'ಗೆ ಕರೆ ನೀಡಿದರೆ, ಕೇರಳದ ಎಡ ಪಕ್ಷಗಳು ನ್ಯಾಯಾಂಗ ತನಿಖೆಗೆ ಆಗ್ರಹಿಸಿದವು.
ಎಲ್ಲರೂ ಸಮಾನರಾಗಿರಬೇಕು ಎನ್ನುವ ಉದ್ದೇಶದಿಂದ ಕೇರಳದ ಸಿಪಿಎಮ್, 'ಇನ್ಮುಂದೆ ಯಾವ ಇರುವೆಯೂ ಕಷ್ಟ ಪಟ್ಟು ದುಡಿಯುವಂತಿಲ್ಲ, ಮಿಡತೆಗಿಂತ ಹೆಚ್ಚು ಸಂಪಾದನೆ ಮಾಡುವಂತಿಲ್ಲ' ಎನ್ನುವ ಕಾನೂನನ್ನು ಜಾರಿಗೊಳಿಸಿತು.
ಆಗಿನ ಸಚಿವ ಲಾಲು ಪ್ರಸಾದ್ ಯಾದವ್, ಭಾರತದ ಎಲ್ಲಾ ರೈಲುಗಳಲ್ಲೂ ಮಿಡತೆಗಳಿಗಾಗಿಯೇ ಮೀಸಲಾದ 'ಮಿಡತೆ ರಥ' ಎನ್ನುವ ಉಚಿತ ಬೋಗಿಯನ್ನು ನಿಗದಿ ಪಡಿಸಿದರು.
ನ್ಯಾಯಾಂಗ ಸಮಿತಿ ಎಚ್ಚೆತ್ತು, 'Preventation of Terrorism Against Grasshoppers Act' (POTGA) ಎನ್ನುವ ಕರಡನ್ನು ಸಿದ್ಧಗೊಳಿಸಿ, ಅದು ಮುಂಬರುವ ಚಳಿಗಾಲದಿಂದಲೇ ಜಾರಿಯಾಗಬೇಕೆಂದು ಆದೇಶ ನೀಡಿತು.
ಅಂದು ಸಚಿವರಾಗಿದ್ದ ಅರ್ಜುನ್ ಸಿಂಗ್, ಎಲ್ಲಾ ಶಿಕ್ಷಣ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಮಿಡತೆಗಳಿಗೆ 'ವಿಶೇಷ ಮೀಸಲಾತಿ' ನೀಡಿದರು.   
ಕಿಕಖಿಎಆದ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ಇರುವೆಗೆ ಭಾರೀ ದಂಡ ವಿಧಿಸಲಾಯಿತು. ಅಷ್ಟು ದುಡ್ಡು ಇರುವೆಯ ಬಳಿ ಇರದ ಕಾರಣ, ಅದರ ಮನೆಯನ್ನು ಜಫ್ತಿ ಮಾಡಿ ಅದನ್ನು ಹೊರಗೆಸೆಯಲಾಯಿತು. ಸುದ್ದಿವಾಹಿನಿಗಳ ಸಮಕ್ಷಮದಲ್ಲಿ ಆ ಮನೆಯನ್ನು ಸಕಲ ಮರ್ಯಾದೆಗಳೊಂದಿಗೆ ಮಿಡತೆಗೆ ಕೊಡಲಾಯಿತು.
ಅರುಂಧತಿ ರಾಯ್ ಅದನ್ನು 'ನ್ಯಾಯದ ಗೆಲುವು' ಎಂದು ಕರೆದರೆ, ಲಾಲು ಪ್ರಸಾದ್ 'ಸಮಾಜವಾದದ ದಿಗ್ವಿಜಯ' ಎಂದು ಕೇಕೆ ಹಾಕಿದರು. ಸಿಪಿಎಮ್ ಅಂತೂ ಇದು 'ದೀನರ ಕ್ರಾಂತಿಕಾರಿ ಪುನರ್‌ಜಾಗೃತಿ' ಎಂದು ಕಣ್ಣು ಒರೆಸಿಕೊಂಡಿತು.
ಕೊನೆಯದಾಗಿ, ಭಾರತ ಸರ್ಕಾರ 'ವಿಶ್ವಸಂಸ್ಥೆಯ ಮಹಾಸಭೆ'ಯಲ್ಲಿ ಮಾತನಾಡಲು ಮಿಡತೆಗೆ ಆಹ್ವಾನ ನೀಡಿತು.
ಕೆಲವು ವರ್ಷಗಳ ನಂತರ....: ನೊಂದ ಇರುವೆ ಬಹಳ ವರ್ಷಗಳ ಹಿಂದೆಯೇ ಭಾರತ ಬಿಟ್ಟು, ಅಮೆರಿಕದಲ್ಲಿ ಶತಕೋಟಿ ಡಾಲರ್ ಬೆಲೆಯ ಕಂಪನಿಯೊಂದನ್ನು ಹುಟ್ಟುಹಾಕಿ ಹಾಯಾಗಿದೆ...
ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟರೂ ದಿನವೂ ನೂರಾರು ಮಿಡತೆಗಳು ಭಾರತದ ಯಾವುದೋ ಮೂಲೆಯಲ್ಲಿ ಉಪವಾಸ ಬಿದ್ದು ಸಾಯುತ್ತಲೇ ಇವೆ...
ಕೊನೆಗೆ: ಕಷ್ಟ ಪಟ್ಟು ದುಡಿಯುವ ಇರುವೆಗಳೆಲ್ಲ ಹೆದರಿ ಹೊರದೇಶಕ್ಕೆ ಓಡಿ ಹೋಗಿದ್ದರಿಂದ ಮತ್ತು ನಮ್ಮ ಸರ್ಕಾರ ಮಿಡತೆಗಳಿಗೆ ಮುದ್ದು ಮಾಡಿ ತುತ್ತು ತಿನಿಸುತ್ತಾ ಕುಳಿತಿದ್ದರಿಂದ, ಭಾರತವಿನ್ನೂ ಅಭಿವೃದ್ಧಿಯಾಗುತ್ತಿರುವ ದೇಶವಾಗಿಯೇ ಉಳಿದಿದೆ!!!
Courtesy Vishveshwar Bhat, Editor of Kannada Prabha - A Kannada dialy in Karnataka

Sunday, February 3, 2013

ಸುಮ್ಮನೆ ಹೀಗೊಂದು ಯೋಚನೆ...

ಸ್ಯಾಂಡಲ್‌ವುಡ್
ತಮ್ಮ ನಿರ್ಮಾಣ, ನಿರ್ದೇಶನದ 'ವಿಶ್ವರೂಪಂ' ಚಿತ್ರದ ಬಿಡುಗಡೆಗೆ ತಮಿಳುನಾಡಿನಲ್ಲಿ ತೊಂದರೆ ಮಾಡಿದ್ದಕ್ಕೆ ಬೇಸರಗೊಂಡಿರುವ ಕಮಲ್‌ಹಾಸನ್ ರಾಜ್ಯ ಬಿಟ್ಟು ಹೋಗುವ ಮಾತನ್ನಾಡಿದ್ದಾರೆ. ಒಂದುವೇಳೆ ಅದು ಸೀರಿಯಸ್ ಆಗಿ ಕಾರ್ಯಗತವಾಗುತ್ತದೆ ಎಂದಾದರೆ ಕಮಲ್‌ಹಾಸನ್ ಬರುವುದಿದ್ದರೆ, ಬೆಂಗಳೂರಿಗೆ ಬರಲಿ. ಹೇಗಿದ್ದರೂ ಕರ್ನಾಟಕದಲ್ಲಿ ತಮಿಳರ ಸಂಖ್ಯೆ ಹೆಚ್ಚಾಗಿಯೇ ಇರುವುದರಿಂದ ಕಮಲ್‌ಗೆ ಅಲ್ಲಿಗೂ ಇಲ್ಲಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣಿಸಲಾರದು. ಬೆಂಗಳೂರನ್ನು ರಿಟೈರ್ ಆದವರ ಪಾಲಿನ ಸ್ವರ್ಗ ಎನ್ನುತ್ತಾರೆ. ಆದರೆ, ಅದಕ್ಕೊಂದು ಅಪವಾದ ಎನ್ನುವಂತೆ ರಿಟೈರ್ ಆಗುವ ಮುಂಚೆಯೇ ಕಮಲ್ ಬರಲಿ. ಇಲ್ಲಿಯೇ ಇದ್ದುಕೊಂಡು, ಕನ್ನಡ ಸಿನಿಮಾಗಳನ್ನು ಮಾಡಲಿ. ಹೇಗಿದ್ರೂ ನಮ್ಮಲ್ಲಿ ಡಬ್ಬಿಂಗ್‌ಗೆ ಒನ್ ವೇ ಪಾಲಿಸಿ. ಅವುಗಳನ್ನು ತಮಿಳು, ತೆಲುಗಿಗೆ ಡಬ್ ಮಾಡುವುದು ಕಷ್ಟವೇನಲ್ಲ. ಅಲ್ಲದೆ, ಕರ್ನಾಟಕಕ್ಕೆ ಎಷ್ಟೋ ಜನ ತಮಿಳುನಾಡಿಂದ ಇಲ್ಲಿಗೆ ವಲಸೆ ಬಂದಿದ್ದಾರೆ, ಬರುತ್ತಿದ್ದಾರೆ, ಅದರಿಂದ ನಮ್ಮ ಕನ್ನಡಿಗರಿಗೆ ಸಮಸ್ಯೆ ಹೆಚ್ಚುತ್ತಿದೆ ಎಂಬ ಹಳೆಯ ಬೇಸರದ ನಡುವೆ ಕನ್ನಡಿಗರು ಹೆಮ್ಮೆಪಡುವಂಥ ಮತ್ತು ಖುಷಿ ಪಡುವಂಥ ಒಂದೇ ಒಂದು ವಲಸೆಯಾದರೂ ಆಗಲಿ. ಕಮಲ್ ಕರ್ನಾಟಕಕ್ಕೆ ಬರಲಿ.!
Courtesy: Harish (KP)

Friday, February 1, 2013

Nano ಕಥೆಗಳು


ಚಿಕ್ಕವನಿದ್ದಾಗ ಐಸ್‌ಕ್ಯಾಂಡಿ ತಿನ್ನುವ ಆಸೆಯಿಂದಾಗಿ, ಅಪ್ಪನ ಜೇಬಿನಿಂದ ದುಡ್ಡು ಕದಿಯಲು ಹೋಗಿದ್ದೆ. ಅಪ್ಪನ ತೂತು ಜೇಬಿನಿಂದ ನನ್ನ ಕೈ ಈಚೆಗೆ ತೂರಿಬಂತು.



ಕಾಲೇಜು ದಿನಗಳಲ್ಲಿ ಸಿಗರೇಟ್ ಸೇದಬೇಡ ಕ್ಯಾನ್ಸರ್ ಬರುತ್ತದೆಂದು ಸದಾ ಸಲಹೆ ನೀಡುತ್ತಿದ್ದ ಗೆಳೆಯನೇ ಇಂದು, ಬಾರಿನ ಮುಂದೆ ಬೀಡಾ ಅಂಗಡಿ ಇಟ್ಟಿದ್ದಾನೆ!



ಅವಳು ಅವನನ್ನು ಬಿಟ್ಟು ಹೋದಳು. ಅವನು ಬೇರೊಬ್ಬಳನ್ನು ಮದುವೆಯಾಗಿ, ಅವಳಿಗಿಂತಲೂ ಹೆಚ್ಚಾಗಿ ತನ್ನ ಹೆಂಡತಿಯನ್ನು ಪ್ರೀತಿಸಿದ, ಪ್ರೀತಿಯಿಂದ ನೋಡಿಕೊಂಡ ಅವಳ ಕೈ ಹಿಡಿದವನು ಸದಾ ಅವಳನ್ನು ಅನುಮಾನಿಸುತ್ತಿದ್ದ. ಅವಳಿಗೇ ಒಮ್ಮೆ ಅನ್ನಿಸಿತು, ಬಡವನಾದರೂ  ಅವನೇ ಪ್ರೀತಿಯಲ್ಲಿ ಶ್ರೀಮಂತ.


ಎದ್ದು ದೇವರ ಮುಖ ನೋಡಿ ದೇವರಿಗೆ ಕೈ ಮುಗಿಯೆಂದು. ಅಮ್ಮ ಕೂಗಿ ಹೇಳಿದ ಧ್ವನಿ ಕಿವಿಗೆ ಬಿದ್ದು, ಹಾಸಿಗೆಯಿಂದೆದ್ದವನ ಕಣ್ಣಿಗೆ ಗೋಡೆಯ ಮೇಲಿನ ಯಾವ ಫೋಟೋದಲ್ಲಿಯೂ ದೇವರು ಕಾಣಲಿಲ್ಲ. ಸೀದಾ ದೇವರ ಕೋಣೆಗೆ ಹೋಗಿ ದೇವರಿಗೆ ಪೂಜೆ ಮಾಡುತ್ತಿದ್ದ ಅಮ್ಮನ ಮುಖ ನೋಡಿ ಕೈ ಮುಗಿದೆ

Saturday, January 26, 2013

ಹರಿ-ಕಥೆ... (Courtesy: Hari Kannada Prabha)

ಒಂದು ದಿನ ಖೇಮು ಆಫೀಸ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ. ಮನೆ ಅಂಗಳದಲ್ಲಿನ ದೃಶ್ಯ ನೋಡಿ ಅವನಿಗೆ ಎದೆ ಒಡೆದುಹೋಗುವಂತಾಯಿತು. ತನ್ನ ಮನೆಯ ನಾಯಿ, ಪಕ್ಕದ ಮನೆಯ ಬೆಕ್ಕನ್ನು ಬಾಯಲ್ಲಿ ಕಚ್ಚಿ ಹಿಡಿದು ಎಳೆದಾಡುತ್ತಿತ್ತು. ಖೇಮು ಓಡಿ ಬಂದವನೇ ತನ್ನ ನಾಯಿಯನ್ನು ಹೊಡೆದು ಬೆಕ್ಕನ್ನು ಬಿಡಿಸಿಕೊಂಡ. ಮುಟ್ಟಿನೋಡಿದರೆ ಬೆಕ್ಕು ಸತ್ತು ಹೋಗಿತ್ತು. ಖೇಮುಗೆ ಗಾಬರಿ. ಮೊದಲೇ ಪಕ್ಕದ ಮನೆಯವನು ಜಗಳಗಂಟ. ಅಲ್ಲದೆ ರಿಟೈರ್ಡ್ ಮಿಲಿಟರಿ ಮ್ಯಾನ್ ಬೇರೆ. 24 ಗಂಟೆ ಕೈಯಲ್ಲಿ ಬಂದೂಕು ಹಿಡಕೊಂಡು ಮಾತಾಡಿದ್ರೆ 'ಸುಟ್ಟುಬಿಡ್ತೀನಿ' ಅಂತಿರ್ತಾನೆ. ನನ್ನ ನಾಯಿ ಅವನ ಬೆಕ್ಕನ್ನು ಸಾಯಿಸಿದೆ ಎಂದು ಗೊತ್ತಾದರೆ ನನ್ನನ್ನೂ ಸಾಯಿಸಿಬಿಡುತ್ತಾನೆ ಎಂದು ಕಂಗಾಲಾದ. ನಂತರ ಕೊಂಚ ಯೋಚಿಸಿ ಆ ಸತ್ತ ಬೆಕ್ಕಿನ ಮರಿಯನ್ನು ತೆಗೆದುಕೊಂಡು ಬಾತ್‌ರೂಮಿಗೆ ಹೋಗಿ ಅದನ್ನು ಚೆನ್ನಾಗಿ ತೊಳೆದು, ಮೈಮೇಲಿನ ಮಣ್ಣು ಧೂಳು ಕ್ಲೀನ್ ಮಾಡಿ ಕತ್ತಲಾಗುವವರೆಗೂ ಕಾದು ಮೆಲ್ಲನೆ ತೆಗೆದುಕೊಂಡು ಹೋಗಿ ಅದನ್ನು ಪಕ್ಕದಮನೆಯ ಅಂಗಳದಲ್ಲಿದ್ದ ಆ ಬೆಕ್ಕಿನ ಗೂಡಿನ ಒಳಗೆ ಇಟ್ಟು ಬಂದುಬಿಟ್ಟ. ಮಿಲಿಟರಿ ಮ್ಯಾನ್ ನೋಡಿದರೆ ಬೆಕ್ಕು ತನ್ನ ಗೂಡಿನಲ್ಲೇ ಸತ್ತುಹೋಗಿದೆ ಎಂದುಕೊಳ್ಳುತ್ತಾನೆ ಎಂಬ ಪ್ಲ್ಯಾನ್ ಖೇಮುನದ್ದು. ಸರಿ ಬೆಳಗ್ಗೆ ಕಾತರದಿಂದ ಬೆಳಗ್ಗೆ ಕಾತರದಿಂದ ಸ್ವಲ್ಪ ಮುಂಚೆಯೇ ಎದ್ದು ಬಂದು ಬಾಲ್ಕನಿಯಲ್ಲಿ ನಿಂತು ಆಚೀಚೆ ನೋಡಿದ ಖೇಮು. ಅದೇ ಸಮಯಕ್ಕೆ ಹೊರಗೆ ಬಂದ ಮಿಲಿಟರಿ ಮ್ಯಾನ್ ಕೇಳಿದ 'ಖೇಮು, ನಿಂಗೊಂದ್ ವಿಷ್ಯ ಗೊತ್ತಾಯ್ತಾ, ನಮ್ಮ ಬೆಕ್ಕಿನ ಮರಿ ಸತ್ತು ಹೋಯ್ತು'. ಖೇಮುಗೆ ನಾಲಗೆ ಒಣಗಿತು. ಹಾ, ಓ...ಛೆ..., ಹೌದಾ? ಎಂದು ತಡವರಿಸಿದ. ಅದಕ್ಕೆ ಮಿಲಿಟರಿ ಮ್ಯಾನ್ ಹೇಳಿದ 'ಹೌದು, ಬೆಕ್ಕಿಗೆ ಜ್ವರ ಬಂದು ಮೊನ್ನೆ ರಾತ್ರಿ ಸತ್ತುಹೋಯ್ತು, ಆದ್ರೆ ವಿಚಿತ್ರ ಅಂದ್ರೆ, ಅದನ್ನ ಮನೆ ಪಕ್ಕದ ಗುಂಡೀಲಿ ಹೂತು  ಹಾಕಿದ್ದೆ. ಆದ್ರೆ ಯಾವನೋ ತಲೆಕೆಟ್ಟೋನು, ಅದನ್ನ ಗುಂಡಿಯಿಂದ ತೆಗೆದು, ಅದಕ್ಕೆ ಸ್ನಾನ ಮಾಡಿಸಿ, ಮೈ ಒರೆಸಿ ಮತ್ತೆ ವಾಪಸ್ ತಗೊಂಡ್‌ಬಂದು ಅದರ ಗೂಡಲ್ಲೇ ಇಟ್ಟು ಹೋಗಿದ್ದಾನೆ....!

Sunday, December 9, 2012

ನಿಜಕ್ಕೂ ಅಂತಹ ಅವಶ್ಯಕತೆ ಇತ್ತಾ....?

ನಿನ್ನೆ ಹಾವೇರಿಯಲ್ಲಿ ನಡೆದ ಕರ್ನಾಟಕ ಜನತಾ ಪಕ್ಷದ ಭರ್ಜರಿ ಉದ್ಘಾಟನೆಯಿಂದ ನಮಗೆನಾದ್ರೂ ಲಾಭ ಇದೆಯಾ..?
ನನಗಂತೂ ಹಾಗೇನೂ ಅನಿಸ್ತಿಲ್ಲ. ಟಿವಿ ಹಾಗೂ ಪತ್ರಿಕೆಗಳ ಮೂಲಕ ತಿಳಿದ ವಿಚಾರ ಅಂದ್ರೆ, ಸಮಾವೇಶಕ್ಕೆ ಖರ್ಚಾಗಿದ್ದು ಬರೋಬ್ಬರಿ ಎಳುವರೆ ಕೋಟಿ ರೂಪಾಯಿ  ಸಮಾವೇಶಕ್ಕೆ ೫೦೦೦ ಸರಕಾರಿ ಬಸ್ಸುಗಳು, ೧೦೦೦೦ ಸಾವಿರ ಖಾಸಗಿ ಬಸ್ಸುಗಳು, ಒಂದುವರೆ ಲಕ್ಷ ಜನರಿಗೆ ಸಾಧಾರಣ ಊಟ, ಹೀಗೇ ಪಟ್ಟಿ ಬೆಳೆಯುತ್ತಾ  ಹೋಗುತ್ತದೆ.
ಪ್ರತಿವರ್ಷ ಇಂತಹ ನೂರಾರು ಸಮಾವೇಶಗಳು ಭಾರತಾದ್ಯಂತ ನಡೆಯುತ್ತಲೇ ಇರುತ್ತವೆ. ಆದರೆ, ಸಮಾವೇಶ ನಮ್ಮ ಜಿಲ್ಲೆಯಲ್ಲಿಯೇ ನಡೆದಿದ್ದರಿಂದ ನನಗೆ ಸ್ವಲ್ಪ ಕಸಿವಿಸಿ ಅಗ್ತಾ ಇದೆ. ಒಂದು ವೇಳೆ, ಯಡಿಯೂರಪ್ಪನರು ಮುಖ್ಯಮಂತ್ರಿಯಾದಾಗಿನಿಂದ ಯಾವ ಅಡೆತಡೆ ಇಲ್ಲದೆ ಸಂಪೂರ್ಣವಾಗಿ, ಸೂಸುತ್ರವಾಗಿ ೫ ವರ್ಷ ಆಡಳಿತ ಮಾಡಿದಿದ್ದರೆ, ಇದೆಲ್ಲಾ ಅಗುತ್ತಿತ್ತಾ? ಹೊಸಪಕ್ಷ ಕೂಡ ರಚನೆ ಆಗುತ್ತಿರಲಿಲ್ಲ.

ಅದು ಒಂದು ಕಡೆಯಾದರೆ, ಜನರಲ್ಲಿ "ನಮ್ಮ ನಾಯಕ ಹೊಸ ಪಕ್ಷ ಕಟ್ಟಿದ್ದಾರೆ, ಅದು ಅಧಿಕಾರಕ್ಕೆ ಬಂದರೆ ನಮ್ಮ ರಾಜ್ಯದ ಸರ್ವತೋಮುಖ ಎಳಿಗೆ ಕಾಣುತ್ತದೆ" ಎಂಬ ಆಶಾಭಾವನೆ ಕೂಡ ಜನರಲ್ಲಿಲ್ಲ. ಈ ಹಿಂದೆ ಅಧಿಕಾರ ಸಿಕ್ಕಾಗ ಇವರೇನು ಮಾಡಿದರು ಎಂಬ ಪ್ರಶ್ನೆ ಕೂಡ ಉದ್ಭವವಾಗುತ್ತದೆ. ಸಮಾವೇಶಕ್ಕೆ ಖರ್ಚಾದ ಹಣದ ಮೂಲ ಕೂಡ ಯಾರು ಕೇಳುತ್ತಿಲ್ಲ. ಯಾಕೆಂದರೆ ಜನಕ್ಕೆ ಒಂದು ಪ್ಲೇಟ್ ಪಲಾವ್, ಒಂದು ಮಜ್ಜಿಗೆ ಪಾಕೆಟ್ ಸಿಕ್ಕರೆ ಮುಗಿಯಿತು. ಅವರಿಗೆ ಇನ್ನೇನು ಬೇಡ. ಪ್ರತಿ ತಿಂಗಳು ಐದು ಅಂಕಿಯ ಸಂಬಳ ಪಡೆಯುವ ಸರಕಾರಿ/ಸರಕಾರೇತರ, ಸರಿಯಾಗಿ ತೆರಿಗೆ ಕಟ್ಟುವ ಉದ್ಯೋಗಿಗಳನ್ನು ಕೇಳಿ, ಆ ಹಣ ಎಲ್ಲಿಯದು ಅಂತ.

ಪಕ್ಷ ಅಂತೂ ರಚನೆಯಾಗಿದೆ. ನನಗೆ ಹೈ ಕಮಾಂಡ್ ಸಂಪೂರ್ಣ ಸ್ವಾತಂತ್ರ ಕೊಡಲಿಲ್ಲ ಅನ್ನುವ ಸಬೂಬು ಊಡ ಹೇಳುವ ಹಾಗಿಲ್ಲ. ಅವರ ಹೊಸ ಪಕ್ಷದಲ್ಲಿ ಅವರೇ ಹೈ ಕಮಾಂಡ್, ಇನ್ಮೇಲಾದರೂ ಅಧಿಕಾರಕ್ಕೆ ಬಂದರೇ, ಒಳ್ಳೆ ಆಡಳಿತ ಕೊಡುತ್ತಾರಾ?

ಕಾದು ನೋಡೊಣ...

Thursday, October 25, 2012

ಇಂದು ಮಾಡಬೇಕಾಗಿರುವ ಕೆಲಸ, ಇಂದೇ ಆಗಬೇಕು...

ಕರ್ತವ್ಯವನ್ನೂ ಮೈಥುನದ  ಹಾಗೇ ಅಭ್ಯಾಸ ಮಾಡಿಕೊಳ್ಳಿ.
It becomes a habit. 

ಹಸಿವು ಇಂತಿಷ್ಟು ಟೈಮಿಗೆ ಹುಟ್ಟಿದಂತೆ, ಚಹದ ಗುರುತು ಇಂತಿಷ್ಟು ಟೈಮಿಗೆ ಆದಂತೆ, ಕಾಮ ಇಂತಿಷ್ಟು ಹೊತ್ತಿಗೆ ಕೆರಳಿದಂತೆ-ಕರ್ತವ್ಯ ಕೂಡ ಕೆರಳುತ್ತದೆ. ದೇಹಕ್ಕೆ ಸಂಬಂಧ ಪಡದೆ ಇರುವ ಸಂಗತಿಯಾದ್ದರಿಂದ ನೆಪ ಹೇಳುತ್ತೇವೆ.

ಒಮ್ಮೆ ಸೋಮಾರಿತನ ಕೊಡವಿಕೊಂಡು ಎದ್ದು ಕುಳಿತರೆ ಎಲ್ಲ ಸರಿ ಹೋಗುತ್ತದೆ