Monday, February 25, 2013

ಮಿಡತೆಯ ಕೂಗಿಗೆ ಓಗೊಡುತ್ತಾ!!!

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಓದಿದ ಹಳೇ ಕತೆಯ ಹೊಸ ಅವತರಣಿಕೆ ವಿಚಿತ್ರ ಕಚಗುಳಿ ನೀಡಿತು. ಆ ಖುಷಿ ನಿಮಗೂ ಇರಲಿ ಎಂದು...

ಹೀಗೊಂದು ಹಳೆ ಕತೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳಿದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಹೈರಾಣಾಗಿ ಸತ್ತುಹೋಯಿತು.
ಒಂದು ವೇಳೆ ಇದು ಭಾರತದಲ್ಲಿ ನಡೆದಿದ್ದರೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು, ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳೆದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಕಂಗಾಲಾಗಿ ಇನ್ನೇನು ಸಾಯುವುದರಲ್ಲಿತ್ತು...ಅಷ್ಟರಲ್ಲಿ ಅದು ಸುದ್ದಿ ವಾಹಿನಿಗಳ ಕಣ್ಣಿಗೆ ಬಿದ್ದುಬಿಟ್ಟಿತು!
ಮಿಡತೆ ಚಳಿಯಿಂದ ಸಾಯುತ್ತಿದ್ದರೂ, ಆರಾಮಾಗಿ ಗೊರಕೆ ಹೊಡೆಯುತ್ತಿದ್ದ ಇರುವೆಯ ವೀಡಿಯೋವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದವು . ಪ್ರಪಂಚದಾದ್ಯಂತ ಈ ವಿಡಿಯೋ ಹರಿದಾಡಿ ಮಿಡತೆಯ ಪರಿಸ್ಥಿತಿಗೆ ಎಲ್ಲರೂ ಮರುಗಿದರು. ಅಂತಹ ನೀಚ ಇರುವೆಯನ್ನು ದೇಶದಲ್ಲಿ ಇರಲೂ ಬಿಡಬಾರದು ಎಂಬ ಆರ್ಭಟ ಎಲ್ಲೆಡೆಯೂ ಮಾರ್ದನಿಸತೊಡಗಿತು.
ಇರುವೆಯ ಮನೆಯ ಮುಂದೆ ಅರುಂಧತಿ ರಾಯ್ ಧರಣಿ ಕೂತಳು. ಮೇಧಾ ಪಾಟ್ಕರ್ ಮಿಡತೆಗಳ ನೇತೃತ್ವ ವಹಿಸಿ, 'ಎಲ್ಲಾ ಮಿಡತೆಗಳನ್ನೂ ಚಳಿಗಾಲದಲ್ಲಿ ಬೆಚ್ಚಗಿನ ಜಾಗಕ್ಕೆ ಸ್ಥಳಾಂತರಿಸಬೇಕು' ಎಂದು ಉಪವಾಸ ಕುಳಿತಳು. 'ಇದು ಮೈನಾರಿಟಿಗಳಿಗೆ ಮಾಡಿದ ಅನ್ಯಾಯ' ಎಂದು ಮಾಯಾವತಿ ಆರ್ಭಟಿಸಿದ್ದೂ ಆಯಿತು.
ಆ ಮಿಡತೆಯ ಮೂಲಭೂತ ಹಕ್ಕನ್ನು ಕಾಪಾಡುವಲ್ಲಿ ವಿಫಲವಾದ ಭಾರತ ಸರ್ಕಾರಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಷ್‌ನಲ್ ಹಿಗ್ಗಾ ಮುಗ್ಗಾ ಛೀಮಾರಿ ಹಾಕಿತು. ಮಿಡತೆಗೆ ಬೆಂಬಲ ನೀಡಬೇಕು ಎಂದು ಅಂತರ್ಜಾಲದಲ್ಲಿ ಆನ್‌ಲೈನ್ ಪಿಟೀಷನ್‌ಗಳು ಹರಿದಾಡತೊಡಗಿದವು (ಇದಕ್ಕೆ ಬೆಂಬಲ ನೀಡಿದರೆ ದೇವರು ನಿಮಗೆ ಸ್ವರ್ಗ ಪ್ರಾಪ್ತಿ ಮಾಡುತ್ತಾನೆ ಎನ್ನುವ ತಲೆಬರಹದಲ್ಲೂ ಕೆಲವು ಪಿಟೀಷನ್‌ಗಳು ಕಾಣಿಸಿಕೊಂಡವು).
ವಿರೋಧ ಪಕ್ಷಗಳ ಎಂಪಿಗಳು ಮಿಡತೆಯ ಮೇಲಾದ ಅನ್ಯಾಯವನ್ನು ಸಹಿಸಲಾರದೆ ಸಭಾತ್ಯಾಗ ಮಾಡಿದರು. ಪಶ್ಚಿಮ ಬಂಗಾಳದ ಎಡಪಕ್ಷಗಳು 'ಬಂಗಾಳ ಬಂದ್‌'ಗೆ ಕರೆ ನೀಡಿದರೆ, ಕೇರಳದ ಎಡ ಪಕ್ಷಗಳು ನ್ಯಾಯಾಂಗ ತನಿಖೆಗೆ ಆಗ್ರಹಿಸಿದವು.
ಎಲ್ಲರೂ ಸಮಾನರಾಗಿರಬೇಕು ಎನ್ನುವ ಉದ್ದೇಶದಿಂದ ಕೇರಳದ ಸಿಪಿಎಮ್, 'ಇನ್ಮುಂದೆ ಯಾವ ಇರುವೆಯೂ ಕಷ್ಟ ಪಟ್ಟು ದುಡಿಯುವಂತಿಲ್ಲ, ಮಿಡತೆಗಿಂತ ಹೆಚ್ಚು ಸಂಪಾದನೆ ಮಾಡುವಂತಿಲ್ಲ' ಎನ್ನುವ ಕಾನೂನನ್ನು ಜಾರಿಗೊಳಿಸಿತು.
ಆಗಿನ ಸಚಿವ ಲಾಲು ಪ್ರಸಾದ್ ಯಾದವ್, ಭಾರತದ ಎಲ್ಲಾ ರೈಲುಗಳಲ್ಲೂ ಮಿಡತೆಗಳಿಗಾಗಿಯೇ ಮೀಸಲಾದ 'ಮಿಡತೆ ರಥ' ಎನ್ನುವ ಉಚಿತ ಬೋಗಿಯನ್ನು ನಿಗದಿ ಪಡಿಸಿದರು.
ನ್ಯಾಯಾಂಗ ಸಮಿತಿ ಎಚ್ಚೆತ್ತು, 'Preventation of Terrorism Against Grasshoppers Act' (POTGA) ಎನ್ನುವ ಕರಡನ್ನು ಸಿದ್ಧಗೊಳಿಸಿ, ಅದು ಮುಂಬರುವ ಚಳಿಗಾಲದಿಂದಲೇ ಜಾರಿಯಾಗಬೇಕೆಂದು ಆದೇಶ ನೀಡಿತು.
ಅಂದು ಸಚಿವರಾಗಿದ್ದ ಅರ್ಜುನ್ ಸಿಂಗ್, ಎಲ್ಲಾ ಶಿಕ್ಷಣ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಮಿಡತೆಗಳಿಗೆ 'ವಿಶೇಷ ಮೀಸಲಾತಿ' ನೀಡಿದರು.   
ಕಿಕಖಿಎಆದ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ಇರುವೆಗೆ ಭಾರೀ ದಂಡ ವಿಧಿಸಲಾಯಿತು. ಅಷ್ಟು ದುಡ್ಡು ಇರುವೆಯ ಬಳಿ ಇರದ ಕಾರಣ, ಅದರ ಮನೆಯನ್ನು ಜಫ್ತಿ ಮಾಡಿ ಅದನ್ನು ಹೊರಗೆಸೆಯಲಾಯಿತು. ಸುದ್ದಿವಾಹಿನಿಗಳ ಸಮಕ್ಷಮದಲ್ಲಿ ಆ ಮನೆಯನ್ನು ಸಕಲ ಮರ್ಯಾದೆಗಳೊಂದಿಗೆ ಮಿಡತೆಗೆ ಕೊಡಲಾಯಿತು.
ಅರುಂಧತಿ ರಾಯ್ ಅದನ್ನು 'ನ್ಯಾಯದ ಗೆಲುವು' ಎಂದು ಕರೆದರೆ, ಲಾಲು ಪ್ರಸಾದ್ 'ಸಮಾಜವಾದದ ದಿಗ್ವಿಜಯ' ಎಂದು ಕೇಕೆ ಹಾಕಿದರು. ಸಿಪಿಎಮ್ ಅಂತೂ ಇದು 'ದೀನರ ಕ್ರಾಂತಿಕಾರಿ ಪುನರ್‌ಜಾಗೃತಿ' ಎಂದು ಕಣ್ಣು ಒರೆಸಿಕೊಂಡಿತು.
ಕೊನೆಯದಾಗಿ, ಭಾರತ ಸರ್ಕಾರ 'ವಿಶ್ವಸಂಸ್ಥೆಯ ಮಹಾಸಭೆ'ಯಲ್ಲಿ ಮಾತನಾಡಲು ಮಿಡತೆಗೆ ಆಹ್ವಾನ ನೀಡಿತು.
ಕೆಲವು ವರ್ಷಗಳ ನಂತರ....: ನೊಂದ ಇರುವೆ ಬಹಳ ವರ್ಷಗಳ ಹಿಂದೆಯೇ ಭಾರತ ಬಿಟ್ಟು, ಅಮೆರಿಕದಲ್ಲಿ ಶತಕೋಟಿ ಡಾಲರ್ ಬೆಲೆಯ ಕಂಪನಿಯೊಂದನ್ನು ಹುಟ್ಟುಹಾಕಿ ಹಾಯಾಗಿದೆ...
ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟರೂ ದಿನವೂ ನೂರಾರು ಮಿಡತೆಗಳು ಭಾರತದ ಯಾವುದೋ ಮೂಲೆಯಲ್ಲಿ ಉಪವಾಸ ಬಿದ್ದು ಸಾಯುತ್ತಲೇ ಇವೆ...
ಕೊನೆಗೆ: ಕಷ್ಟ ಪಟ್ಟು ದುಡಿಯುವ ಇರುವೆಗಳೆಲ್ಲ ಹೆದರಿ ಹೊರದೇಶಕ್ಕೆ ಓಡಿ ಹೋಗಿದ್ದರಿಂದ ಮತ್ತು ನಮ್ಮ ಸರ್ಕಾರ ಮಿಡತೆಗಳಿಗೆ ಮುದ್ದು ಮಾಡಿ ತುತ್ತು ತಿನಿಸುತ್ತಾ ಕುಳಿತಿದ್ದರಿಂದ, ಭಾರತವಿನ್ನೂ ಅಭಿವೃದ್ಧಿಯಾಗುತ್ತಿರುವ ದೇಶವಾಗಿಯೇ ಉಳಿದಿದೆ!!!
Courtesy Vishveshwar Bhat, Editor of Kannada Prabha - A Kannada dialy in Karnataka: 

No comments:

Post a Comment