Sunday, December 9, 2012

ನಿಜಕ್ಕೂ ಅಂತಹ ಅವಶ್ಯಕತೆ ಇತ್ತಾ....?

ನಿನ್ನೆ ಹಾವೇರಿಯಲ್ಲಿ ನಡೆದ ಕರ್ನಾಟಕ ಜನತಾ ಪಕ್ಷದ ಭರ್ಜರಿ ಉದ್ಘಾಟನೆಯಿಂದ ನಮಗೆನಾದ್ರೂ ಲಾಭ ಇದೆಯಾ..?
ನನಗಂತೂ ಹಾಗೇನೂ ಅನಿಸ್ತಿಲ್ಲ. ಟಿವಿ ಹಾಗೂ ಪತ್ರಿಕೆಗಳ ಮೂಲಕ ತಿಳಿದ ವಿಚಾರ ಅಂದ್ರೆ, ಸಮಾವೇಶಕ್ಕೆ ಖರ್ಚಾಗಿದ್ದು ಬರೋಬ್ಬರಿ ಎಳುವರೆ ಕೋಟಿ ರೂಪಾಯಿ  ಸಮಾವೇಶಕ್ಕೆ ೫೦೦೦ ಸರಕಾರಿ ಬಸ್ಸುಗಳು, ೧೦೦೦೦ ಸಾವಿರ ಖಾಸಗಿ ಬಸ್ಸುಗಳು, ಒಂದುವರೆ ಲಕ್ಷ ಜನರಿಗೆ ಸಾಧಾರಣ ಊಟ, ಹೀಗೇ ಪಟ್ಟಿ ಬೆಳೆಯುತ್ತಾ  ಹೋಗುತ್ತದೆ.
ಪ್ರತಿವರ್ಷ ಇಂತಹ ನೂರಾರು ಸಮಾವೇಶಗಳು ಭಾರತಾದ್ಯಂತ ನಡೆಯುತ್ತಲೇ ಇರುತ್ತವೆ. ಆದರೆ, ಸಮಾವೇಶ ನಮ್ಮ ಜಿಲ್ಲೆಯಲ್ಲಿಯೇ ನಡೆದಿದ್ದರಿಂದ ನನಗೆ ಸ್ವಲ್ಪ ಕಸಿವಿಸಿ ಅಗ್ತಾ ಇದೆ. ಒಂದು ವೇಳೆ, ಯಡಿಯೂರಪ್ಪನರು ಮುಖ್ಯಮಂತ್ರಿಯಾದಾಗಿನಿಂದ ಯಾವ ಅಡೆತಡೆ ಇಲ್ಲದೆ ಸಂಪೂರ್ಣವಾಗಿ, ಸೂಸುತ್ರವಾಗಿ ೫ ವರ್ಷ ಆಡಳಿತ ಮಾಡಿದಿದ್ದರೆ, ಇದೆಲ್ಲಾ ಅಗುತ್ತಿತ್ತಾ? ಹೊಸಪಕ್ಷ ಕೂಡ ರಚನೆ ಆಗುತ್ತಿರಲಿಲ್ಲ.

ಅದು ಒಂದು ಕಡೆಯಾದರೆ, ಜನರಲ್ಲಿ "ನಮ್ಮ ನಾಯಕ ಹೊಸ ಪಕ್ಷ ಕಟ್ಟಿದ್ದಾರೆ, ಅದು ಅಧಿಕಾರಕ್ಕೆ ಬಂದರೆ ನಮ್ಮ ರಾಜ್ಯದ ಸರ್ವತೋಮುಖ ಎಳಿಗೆ ಕಾಣುತ್ತದೆ" ಎಂಬ ಆಶಾಭಾವನೆ ಕೂಡ ಜನರಲ್ಲಿಲ್ಲ. ಈ ಹಿಂದೆ ಅಧಿಕಾರ ಸಿಕ್ಕಾಗ ಇವರೇನು ಮಾಡಿದರು ಎಂಬ ಪ್ರಶ್ನೆ ಕೂಡ ಉದ್ಭವವಾಗುತ್ತದೆ. ಸಮಾವೇಶಕ್ಕೆ ಖರ್ಚಾದ ಹಣದ ಮೂಲ ಕೂಡ ಯಾರು ಕೇಳುತ್ತಿಲ್ಲ. ಯಾಕೆಂದರೆ ಜನಕ್ಕೆ ಒಂದು ಪ್ಲೇಟ್ ಪಲಾವ್, ಒಂದು ಮಜ್ಜಿಗೆ ಪಾಕೆಟ್ ಸಿಕ್ಕರೆ ಮುಗಿಯಿತು. ಅವರಿಗೆ ಇನ್ನೇನು ಬೇಡ. ಪ್ರತಿ ತಿಂಗಳು ಐದು ಅಂಕಿಯ ಸಂಬಳ ಪಡೆಯುವ ಸರಕಾರಿ/ಸರಕಾರೇತರ, ಸರಿಯಾಗಿ ತೆರಿಗೆ ಕಟ್ಟುವ ಉದ್ಯೋಗಿಗಳನ್ನು ಕೇಳಿ, ಆ ಹಣ ಎಲ್ಲಿಯದು ಅಂತ.

ಪಕ್ಷ ಅಂತೂ ರಚನೆಯಾಗಿದೆ. ನನಗೆ ಹೈ ಕಮಾಂಡ್ ಸಂಪೂರ್ಣ ಸ್ವಾತಂತ್ರ ಕೊಡಲಿಲ್ಲ ಅನ್ನುವ ಸಬೂಬು ಊಡ ಹೇಳುವ ಹಾಗಿಲ್ಲ. ಅವರ ಹೊಸ ಪಕ್ಷದಲ್ಲಿ ಅವರೇ ಹೈ ಕಮಾಂಡ್, ಇನ್ಮೇಲಾದರೂ ಅಧಿಕಾರಕ್ಕೆ ಬಂದರೇ, ಒಳ್ಳೆ ಆಡಳಿತ ಕೊಡುತ್ತಾರಾ?

ಕಾದು ನೋಡೊಣ...

Thursday, October 25, 2012

ಇಂದು ಮಾಡಬೇಕಾಗಿರುವ ಕೆಲಸ, ಇಂದೇ ಆಗಬೇಕು...

ಕರ್ತವ್ಯವನ್ನೂ ಮೈಥುನದ  ಹಾಗೇ ಅಭ್ಯಾಸ ಮಾಡಿಕೊಳ್ಳಿ.
It becomes a habit. 

ಹಸಿವು ಇಂತಿಷ್ಟು ಟೈಮಿಗೆ ಹುಟ್ಟಿದಂತೆ, ಚಹದ ಗುರುತು ಇಂತಿಷ್ಟು ಟೈಮಿಗೆ ಆದಂತೆ, ಕಾಮ ಇಂತಿಷ್ಟು ಹೊತ್ತಿಗೆ ಕೆರಳಿದಂತೆ-ಕರ್ತವ್ಯ ಕೂಡ ಕೆರಳುತ್ತದೆ. ದೇಹಕ್ಕೆ ಸಂಬಂಧ ಪಡದೆ ಇರುವ ಸಂಗತಿಯಾದ್ದರಿಂದ ನೆಪ ಹೇಳುತ್ತೇವೆ.

ಒಮ್ಮೆ ಸೋಮಾರಿತನ ಕೊಡವಿಕೊಂಡು ಎದ್ದು ಕುಳಿತರೆ ಎಲ್ಲ ಸರಿ ಹೋಗುತ್ತದೆ

Sunday, August 19, 2012

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವಸಂತ ನಾಡಿಗೇರ ಮತ್ತು "ವಿಜಯ ಕರ್ನಾಟಕ"



ಪ್ರಸಾರ ಸಂಖ್ಯೆಯಲ್ಲಿ ಕರ್ನಾಟಕದ ನಂಬರ್ ಒನ್ ಪತ್ರಿಕೆ ಎನಿಸಿರುವ "ವಿಜಯ ಕರ್ನಾಟಕ" ಸಂಪಾದಕರಾಗಿ ವಸಂತ ನಾಡಿಗೇರ ನೇಮಕಗೊಂಡಿದ್ದಾರೆ. ಸಂಪಾದಕ ಇ. ರಾಘವನ್ ಅವರ ಹಠಾತ್ ನಿಧನದಿಂದಾಗಿ ತೆರವಾದ ಸ್ಥಾನವನ್ನು ಅವರು ತುಂಬಿದ್ದಾರೆ.
"ಕನ್ನಡಪ್ರಭ" ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಹತ್ತು ವರ್ಷ ಕೆಲಸ ಮಾಡಿ ಆನಂತರದ ಹನ್ನೊಂದು ವರ್ಷಗಳಿಂದ ವಿಜಯ ಕರ್ನಾಟಕದಲ್ಲಿ ವಸಂತ್ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಅವರನ್ನು ಪತ್ರಿಕೆಯ ತಾತ್ಕಾಲಿಕ ಸಂಪಾದಕರನ್ನಾಗಿ ( Editor - Acting ) ನೇಮಿಸಲಾಗಿದೆ.
ಪತ್ರಿಕೆಯ ದೆಹಲಿ ಪ್ರತಿನಿಧಿಯಾಗಿರುವ ಬಿ. ಉಮಾಪತಿ ಅವರನ್ನು ಪತ್ರಿಕೆಯ ಸಂಪಾದಕರನ್ನಾಗಿ ಮಾಡಿ, ರಾಘವನ್ ಅವರನ್ನು ಸಂಪಾದಕೀಯ ಸಲಹೆಗಾರರನ್ನಾಗಿ ಇಟ್ಟುಕೊಳ್ಳಬೇಕೆಂಬ ಪ್ರಸ್ತಾವನೆ ಆಡಳಿತ ಮಂಡಳಿಗಿತ್ತು. ಆದರೆ, ಉಮಾಪತಿ ಅವರು ಮನಸ್ಸು ಮಾಡಿರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಉಮಾ ಒಲವು ಎತ್ತ ಎನ್ನುವುದು ಇನ್ನು ತಿಳಿದುಬರಬೇಕಷ್ಟೆ.
ಮಾಧ್ಯಮದ ಒಂದು ವೇದಿಕೆಗೆ ಸಂಪಾದಕರು ಯಾರು ಎನ್ನುವುದರ ಮೇಲೆ ಆ ಪತ್ರಿಕೆಯ ಜನಪ್ರಿಯತೆ ಅಷ್ಟರಮಟ್ಟಿಗೆ ಅವಲಂಬಿತವಾಗಿರುತ್ತದೆ. ಇದು ಸೆಲೆಬ್ರಿಟಿ ಸ್ಟೇಟಸ್ ಹೊಂದಿರುವ ಸಂಪಾದಕರಿಗೆ ಮಾತ್ರ ಅನ್ವಯಿಸುತ್ತದೆ. ಇತರರಿಗೆ ಇಲ್ಲ.
ಆದರೆ, ಒಂದು ಪತ್ರಿಕೆಯ ನಿರ್ವಹಣೆಯಲ್ಲಿ ಸುದ್ದಿಸಂಪಾದಕನ ಪಾತ್ರ ಅತ್ಯಂತ ಮಹತ್ವವಾಗಿರುತ್ತದೆ. ವಸಂತ ನಾಡಿಗೇರರಿಗೆ ದೊರೆತ ಭಡ್ತಿಯಿಂದಾಗಿ ಪತ್ರಿಕೆಯ ಆರಂಭದ ದಿನದಿಂದಲೂ ಸೇವೆ ಸಲ್ಲಿಸುತ್ತಿರುವ ಲೋಕೇಶ್ ಕಾಯರ್ಗ ಅವರು ವಿಕದ ಸುದ್ದಿಸಂಪಾದಕ ಹುದ್ದೆಗೆ ಏರುವ ಸಾಧ್ಯತೆಯಿದೆ.
ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ಅವರು ಹೇಳುವ ಪ್ರಕಾರ, ಕರ್ನಾಟಕದ ಅತ್ಯಂತ ದಕ್ಷ ಮತ್ತು ಸಮರ್ಥ ಸುದ್ದಿಸಂಪಾದಕ ದಿವಂಗತ ಖಾದ್ರಿ ಶಾಮಣ್ಣ. ಶಾಮಣ್ಣ "ಪ್ರಜಾವಾಣಿ"ಯಲ್ಲಿ ಸುದ್ದಿ ಸಂಪಾದಕರಾಗಿ ಮಾಡಿದ ಕೆಲಸ ಪತ್ರಿಕೋದ್ಯಮದಲ್ಲಿ ವೃತ್ತಿನಿರತರಾಗಿರುವವರಿಗೆ ತಿಳಿದಿರುತ್ತದೆ. ಶಾಮಣ್ಣ ಅವರಿಗೆ ಕರ್ನಾಟಕದ ನರನಾಡಿಗಳ ಅರಿವಿತ್ತು.
ಇವತ್ತು ಕನ್ನಡನಾಡಿನ ಕೆಲವು ಪತ್ರಿಕೆ, ಟಿವಿ ವಾಹಿನಿಗಳಲ್ಲಿ ಸಂಪಾದಕ ಹುದ್ದೆ ಅಲಂಕರಿಸಿರುವ ವ್ಯಕ್ತಿಗಳ ಹೆಸರೇ ಕೇಳದವರು ಇದ್ದಾರೆ. ಹೆಸರೇ ಗೊತ್ತಿಲ್ಲದಿದ್ದ ಮೇಲೆ ಅವರ ಸಾಮರ್ಥ್ಯ ಮತ್ತು ವರ್ಚಸ್ಸು ಚರ್ಚಿಸುವ ಅಗತ್ಯ ಬೀಳುವುದಿಲ್ಲ.
ಹಾಗಂತ ಅಂಥ ವ್ಯಕ್ತಿಗಳಿಗೆ ಸಂಪಾದಕ ಹುದ್ದೆ ನಿರ್ವಹಿಸುವ ಅರ್ಹತೆ ಇಲ್ಲವೆಂದಲ್ಲ. ಕೆಲವರು ತೆರೆಯಮರೆಯ ಕಾಯಿ ಅಥವಾ ಹಣ್ಣಿನಂತೆ ಕಾರ್ಯ ನಿರ್ವಹಿಸುತ್ತಾರೆ. ಅದರಲ್ಲೂ ಒಂದು ಪತ್ರಿಕೆಯ ಸುದ್ದಿ ನಿರ್ವಹಣೆಯಲ್ಲಿ ಸುದ್ದಿ ಸಂಪಾದಕನ (ಳ) ಕೈಚಳಕ, ಬುದ್ಧಿಚಳಕ ವೆರಿ ಇಂಪಾರ್‌ಟೆಂಟ್ ಆಗುತ್ತದೆ.
ಇವತ್ತಿನ ಪತ್ರಿಕೋದ್ಯಮದ ಎಲ್ಲ ಮೂಲೆಗಳಲ್ಲಿ ತಂತ್ರಜ್ಞಾನ ಆವರಿಸಿಕೊಂಡಿರುವುದರಿಂದ ಸುದ್ದಿ ಸಂಪಾದಕ ಹುದ್ದೆಯ ವ್ಯಾಖ್ಯಾನವೂ ಬದಲಾಗಿದೆ. ಅನುಭವಿಗಳ, ಜವಾಬ್ದಾರಿ ಸ್ಥಾನದಲ್ಲಿರುವರ ಕಣ್ಣಿಗೆ ಬೀಳದೆ ಒಂದು ಸುದ್ದಿ ಬೆಳಕಾಗುವ ಸ್ಥಿತಿ ಇದೆ. ಕಿರಿಯ ಪತ್ರಕರ್ತರಿಗೆ ಇದು ಕಲಿಕೆಯ ಪರ್ವವೂ ಹೌದು, ತಪ್ಪೆಸಗಲು ಸಿಕ್ಕ ಛಾನ್ಸೂ ಹೌದು.
ಮಾತು ಕಡಿಮೆ, ಕೆಲಸ ಹೆಚ್ಚು; ಸಮಯಪಾಲನೆ ಮತ್ತು ಜವಾಬ್ದಾರಿಗೆ ಹೆಸರಾಗಿರುವ, ಸುದ್ದಿಯ ಕೆಮಿಷ್ಟ್ರಿ ಗೊತ್ತಿರುವ, ರಸಾಯನ ಶಾಸ್ತ್ರದ ಸ್ನಾತಕೋತ್ತರ ಪದವೀಧರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವಸಂತ ನಾಡಿಗೇರರಿಗೆ ನಮ್ಮ ಅಭಿನಂದನೆಗಳು

ಗುರು ಯಾವ ರೂಪದಲ್ಲಿ ಬರುತ್ತಾನೋ ಬಲ್ಲವನಾರು?


ಪ್ರತಿಕ್ಷಣ ನಾವು ಮಾಡುವ ಆಲೋಚನೆಗಳು, ತೆಗೆದುಕೊಳ್ಳುವ ನಿರ್ಧಾರಗಳು, ಆಯ್ಕೆ ಮಾಡಿಕೊಳ್ಳುವ ದಾರಿ ನಮ್ಮ ಬದುಕನ್ನು ಮತ್ತು ಅದು ಸಾಗುವ ದಿಕ್ಕನ್ನು ನಿರ್ಧರಿಸುತ್ತವೆ. ಬದುಕು ಒಂದು ರೀತಿ ಚದುರಂಗದ ಆಟದಂತೆ. ಇಂದು ನಡೆಸುವ ನಮ್ಮ ಒಂದೊಂದು ನಡೆ ನಮ್ಮ ಮುಂದಿನ ಬದುಕನ್ನು ರೂಪಿಸುತ್ತಾ ಹೋಗುತ್ತದೆ. ಹಾಗಾಗಿ ಪ್ರತಿ ದಿನ ನಾವು ತೆಗೆದುಕೊಳ್ಳುವ ನಿರ್ಧಾರಗಳು, ಮಾಡಿಕೊಳ್ಳುವ ಆಯ್ಕೆಗಳು, ನಮ್ಮ ಆಲೋಚನೆಯ ದಿಕ್ಕು-ದಸೆಗಳ ಕಡೆ ನಿರಂತರ ಗಮನ ಅಗತ್ಯ. ನಮಗೆ ಬದುಕಲ್ಲಿ ಸರಿಯಾದ ಆಯ್ಕೆಯನ್ನು, ನಿರ್ಧಾರವನ್ನು ತೆಗೆದುಕೊಳ್ಳಲು ನಮ್ಮಲ್ಲಿ ಅರಿವನ್ನು ಮೂಡಿಸುವವನೆ ನಮಗೆ ಗುರು.
ಆ ಗುರು ಯಾವ ರೂಪದಲ್ಲಾದರೂ ಬರಬಹುದು. ತಂದೆ, ತಾಯಿ, ಅಕ್ಕ, ಅಣ್ಣ, ಸ್ಕೂಲ್ ಮೇಷ್ಟ್ರು, ಸ್ನೇಹಿತ, ಗೆಳತಿ... ಹೀಗೆ... ಆ ದಿನ, ಆ ಹುಡುಗನ ಬದುಕಲ್ಲಿ ಗುರು, ತೋಟದ ಮಾಲಿಯ ರೂಪದಲ್ಲಿ ಬಂದಿದ್ದ. ಆರನೇ ವಯಸ್ಸಿನಲ್ಲೇ ಅವನನ್ನು ಭೇಟಿಯಾಗಿದ್ದು ಅವನ ಅದೃಷ್ಟ. ನಿಮಗೆ ಆ ಹುಡುಗನ ಆರನೇ ವಯಸ್ಸಿನಲ್ಲಿ ನಡೆದ ಘಟನೆ ಬಗ್ಗೆ ಹೇಳಬೇಕು.
***
ಎಲ್ಲಾ ಹುಡುಗರಂತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ, ಅವನ ಜೊತೆಯಿದ್ದ ಕೊಂಚ ದೊಡ್ಡ ವಯಸ್ಸಿನ ಹುಡುಗರು ದಾರಿಯಲ್ಲಿದ್ದ ಮಾವಿನ ತೋಪಿಗೆ ಹೋಗಲು ಮಾತಾಡಿಕೊಳ್ಳುತ್ತಿದ್ದರು. ಚಿಕ್ಕ ಹುಡುಗರು ಬೇರೆ, ರುಚಿಕರ ಮಾವಿನ ಹಣ್ಣಿನ ಆಸೆ. ಹುಡುಗರಲ್ಲಿ ತಪ್ಪು-ಸರಿಯ ವಿವೇಚನೆಯನ್ನು ಪಕ್ಕಕ್ಕೆ ತಳ್ಳಿತ್ತು. ಸರಿ, ಎಲ್ಲರೂ ಮಾವಿನ ತೋಪಿಗೆ ನುಗ್ಗಿದರು. ಮರ ಹತ್ತಿ ಕೈಗೆ ಸಿಕ್ಕ ಹಣ್ಣನ್ನು ಕೀಳತೊಡಗಿದರು. ಆ ಕುಳ್ಳ ಹುಡುಗ ಮಾತ್ರ ಮರದ ಕೆಳಗೆ ನಿಂತು ಮಾವಿನ ಹಣ್ಣಿನ ಆಸೆಯಿಂದ, ಮರ ಹತ್ತಿದ್ದ ಕೊಂಚ ದೊಡ್ಡ ವಯಸ್ಸಿನ ಹುಡುಗರನ್ನು ಬೆರಗಿನಿಂದ ನೋಡುತ್ತಾ ಅಯೋಮಯ ಸ್ಥಿತಿಯಲ್ಲಿ ನಿಂತಿದ್ದ.
ಆಗ ಓಡಿ ಬಂದ ನೋಡಿ ತೋಟದ ಮಾಲಿ, 'ಯಾರ್‌ಲಾ ಅಲ್ಲಿ!' ಎಂದು ಸುಮ್ಮನೆ ಹೂಂಕರಿಸಿ. ಮರ ಹತ್ತಿದ್ದ ಎಲ್ಲಾ ಪುಂಡು ಹುಡುಗರು ದಡಬಡನೆ ಎದ್ದೆವೋ, ಬಿದ್ದೆವೋ ಎಂಬಂತೆ ತಪ್ಪಿಸಿಕೊಂಡು ಓಡಿಹೋದರು. ಆದರೆ ಅಯೋಮಯ ಸ್ಥಿತಿಯಲ್ಲಿದ್ದ ಆ ಪುಟ್ಟ ಹುಡುಗ ತೋಟದ ಮಾಲಿಯ ಕೈಯಲ್ಲಿ ಸಿಕ್ಕಿಬಿದ್ದ. ಕಷ್ಟಪಟ್ಟು ಬೆಳೆದ ಫಲ ಕಳ್ಳತನವಾಗುತ್ತಿತ್ತು, ಜೊತೆಗೆ ಪುಂಡು ಹುಡುಗರ ಊಡಾಳುತನದಿಂದ ಮಾಲಿ ಮೊದಲೇ ಬೇಸತ್ತಿದ್ದ. ಸಿಕ್ಕಿಬಿದ್ದ ಕುಳ್ಳ ಹುಡುಗನಿಗೆ ಎರಡು ಬಿಗಿದ. ಜೊತೆಗೆ ಯಥೇಚ್ಛವಾಗಿ ಬೈಯ್ಯತೊಡಗಿದ. ಗಾಬರಿ ಬಿದ್ದ ಹುಡುಗ ಜೋರಾಗಿ ಅಳತೊಡಗಿದ.
ಸೋರುತ್ತಿರುವ ಮೂಗನ್ನು ಏರಿಸುತ್ತಲೇ, ಬಿಕ್ಕುತ್ತಾ ಹುಡುಗ ನುಡಿದ "ನಾನು ಅಪ್ಪ-ಅಮ್ಮ ಇಲ್ಲದ ಅನಾಥ.. ಅದಕ್ಕೆ ನನಗೆ ಹೊಡೆದು ಬಡೆದು ಬೈತೀರೇನ್ರಿ?" ಅಂದುಬಿಟ್ಟ. ಆ ಕುಳ್ಳ ಹುಡುಗನ ತಂದೆ-ತಾಯಿ ಅವನು ಚಿಕ್ಕವನಾಗಿದ್ದಾಗಲೇ ತೀರಿಕೊಂಡಿದ್ದರು. ಅವನ ತಾತನ ಮನೆಯಲ್ಲಿ ಬೆಳೆಯುತ್ತಿದ್ದ. ತೋಟದ ಮಾಲಿ ಕೊಂಚ ಮೆದುವಾದ. ಅವನು ಮಕ್ಕಳನ್ನು ಹೆತ್ತು ಹೊತ್ತು ಆಡಿಸಿದ ತಂದೆ. ಎಲ್ಲೋ ಕೊಂಚ ಕರುಳು ಚುರುಕ್ಕಂತು. ಕೋಪ ಹಾಗೆ ಆವಿಯಾಯಿತು. "ಮಗು, ತಂದೆ ತಾಯಿ ಇಲ್ಲದ ನೀನು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕಲ್ಲವೆ? ತಂದೆ ತಾಯಿ ಇಲ್ಲದವ ಎಂಬುದು ಎಲ್ಲಾ ಪುಂಡಾಟಕ್ಕೆ ನೆಪವಾಗಬಾರದಲ್ಲವೆ? ಹೋಗ್-ಹೋಗು ಜವಾಬ್ದಾರಿಯಿಂದ ಇರುವುದನ್ನು ಕಲಿ" ಎಂದು ಮನೆಗೆ ಕಳುಹಿಸಿಬಿಟ್ಟ.
ತೋಟದ ಮಾಲಿಯ ಮಾತು ಆರು ವರುಷದ ಚಿಕ್ಕ ಹುಡುಗನ ಮೇಲೆ ಎಂಥಾ ಪ್ರಭಾವ ಬೀರಿತೆಂದರೆ, ಆ ಹುಡುಗ ಜೀವನ ಪೂರ್ತಿ ಅಳತೆ ತಪ್ಪಿ ನಡೆಯಲಿಲ್ಲ, ಎಂದಿಗೂ ಜವಾಬ್ದಾರಿಯನ್ನು ಮರೆಯಲಿಲ್ಲ. ಜವಾಬ್ಧಾರಿಯುತ ನಡೆ ನುಡಿಯನ್ನು ಮತ್ತು ಅಂತರಂಗದ ಶುದ್ಧಿಯನ್ನು ತನ್ನ ಜೀವನ ಪೂರ್ತಿ ವ್ರತದಂತೆ ಆಚರಿಸಿಕೊಂಡು ಬಂದ. ಹೀಗೆ ಹೊಸ ಅರಿವಿಗೆ ಕಣ್ತೆರದ ಹುಡುಗ, ಮುಂದೆ ಭಾರತದ ಪ್ರಧಾನ ಮಂತ್ರಿಯಾದ, ಭಾರತ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಯಾದ. ಅಂದ ಹಾಗೆ ಆ ಕುಳ್ಳ ಹುಡುಗನ ಹೆಸರು ಲಾಲ್ ಬಹದ್ಧೂರ್ ಶಾಸ್ತ್ರಿ. ಯುದ್ಧದ ಸಂಕಷ್ಟಕಾಲದಲ್ಲಿ 'ಜೈ ಜವಾನ್ ಜೈ ಕಿಸಾನ್' ಎಂದು ದೇಶವನ್ನು ಮುನ್ನಡೆಸಿದ ಮಹಾತ್ಮ ಲಾಲ್ ಬಹದ್ಧೂರ್ ಶಾಸ್ತ್ರಿ.
***
ನಮ್ಮ ಎಲ್ಲಾ ತಪ್ಪು ನಡೆಗೆ, ನಡತೆಗೆ, ಆಲೋಚನೆಗಳಿಗೆ ಕಾರಣವಾಗುವ ನೂನ್ಯತೆಗಳು, ಲೋಪ ದೋಷಗಳು ನಮ್ಮ ಬದುಕನ್ನು ಮೇಲೆತ್ತುವ ಸ್ಪೂರ್ತಿದಾಯಕ ಶಕ್ತಿ ಆಗಬಲ್ಲದು ಅಲ್ಲವೇ? ಎಲ್ಲಾ ನ್ಯೂನತೆಯ ಕುಂಟು ನೆಪಗಳನ್ನು ಮೀರುವ, ಬದುಕಿನ ಹೊಸ ಸವಾಲಿಗೆ, ಅರಿವಿಗೆ, ಜವಾಬ್ದಾರಿಗೆ ತೆರೆದುಕೊಳ್ಳುವ 'ಶುಭಸಂಕಲ್ಪ' ಮಾಡೋಣ. ಆ ಅರಿವನ್ನು ಮೂಡಿಸುವ ಗುರು ಯಾವ ರೂಪದಲ್ಲಿ ಬಂದರೂ ಸ್ವೀಕರಿಸೋಣ.
ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!

ಹಂಸಲೇಖ-ಹರಿಕೃಷ್ಣ ಇಬ್ಬರಲ್ಲಿ ಯಾರು ಪ್ರತಿಭಾನ್ವಿತರು?


ಪ್ರಸಕ್ತ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕರು ಯಾರೆಂದರೆ ಅದಕ್ಕೆ ಥಟ್ ಅಂತ ಬರುವ ಉತ್ತರವೆಂದರೆ ವಿ ಹರಿಕೃಷ್ಣ. ಹಂಸಲೇಖ, ಗುರುಕಿರಣ್ ನಂತರ ಹರಿಕೃಷ್ಣ ಆ ಸ್ಥಾನದಲ್ಲಿ ಕೆಲ ವರ್ಷಗಳಿಂದ ವಿರಾಜಮಾನರಾಗಿದ್ದಾರೆ. ನಾದಬ್ರಹ್ಮ ಬಿರುದಾಂಕಿತ ಹಂಸಲೇಖ ತನ್ನದೇ ಆದ ಶೈಲಿಯಲ್ಲಿ ಸಂಗೀತ ನೀಡಿ ಹೆಸರು ಗಳಿಸಿದವರು.


ಒಂದು ಲೆಕ್ಕದಲ್ಲಿ ಕನಸುಗಾರ ರವಿಚಂದ್ರನ್ ಚಿತ್ರಕ್ಕೆ ಹೊಸ ಆಯಾಮ ನೀಡಿದವರು ಹಂಸಲೇಖ ಅಂದರೆ ಅತಿಶಯೋಕ್ತಿ ಆಗಲಾರದು. ಜಾನಪದ ಶೈಲಿಯಿಂದ ಹಿಡಿದು ಎಲ್ಲಾ ರೀತಿಯ ಸಂಗೀತದಲ್ಲಿ ಪಳಗಿ ಒಂದು ಕಾಲದಲ್ಲಿ ಯುವ ಪೀಳಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇನ್ನು ಇತ್ತೀಚಿನ ಹೆಚ್ಚುಕಮ್ಮಿ ಎಲ್ಲಾ ಹಿಟ್ ಗೀತಗಳನ್ನು ನೀಡಿದವರಲ್ಲಿ ಹರಿಕೃಷ್ಣ ಅವರದ್ದು ಸಿಂಹಪಾಲು.
ಹಂಸಲೇಖ ಮತ್ತು ಹರಿಕೃಷ್ಣ ಈ ಇಬ್ಬರು ಸಂಗೀತ ನಿರ್ದೇಶಕರಲ್ಲಿ ಯಾರು ಪ್ರತಿಭಾನ್ವಿತರು? ಹಂಸಲೇಖ ಪ್ರತಿಭೆಗೆ ಹರಿಕೃಷ್ಣ ಸರಿದೂಗಬಲ್ಲರೇ? ಈ ಹೊಸ ಚರ್ಚೆಗೆ ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಾಂದಿ ಹಾಡಿದ್ದಾರೆ. ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ನಮ್ಮ ಹರಿಕೃಷ್ಣ ಅವರು ಹಂಸಲೇಖಾ ಅವರ ಪ್ರತಿಭೆಗೆ ತೂಗಬಲ್ಲರಾದ ಸಂಗೀತ ನಿರ್ದೇಶಕರೆಂದು ಹಾಡಿ ಹೊಗಳಿದರು.
ಓದುಗ ಬಾಂಧವರಿಗೆ ತಿಳಿದಿರುವಂತೆ ಹರಿಕೃಷ್ಣ ಅವರು ಹಂಸಲೇಖ ಗರಡಿಯಲ್ಲೇ ಕೆಲಸ ಮಾಡಿ ಪಳಗಿದವರು. ಜೊತೆಜೊತೆಯಲಿ ಎನ್ನುವ ಸಿನಿಮಾದ ಮೂಲಕ ಸಂಗೀತ ನಿರ್ದೇಶಕನಾಗುವ ಅವಕಾಶ ಗಿಟ್ಟಿಸಿದ ಹರಿಕೃಷ್ಣ ಅದಾದ ಮೇಲೆ ಹಿಂದಿರುಗಿ ತಿರುಗಿ ನೋಡುವ ಪ್ರಮೇಯವೇ ಬಂದಿಲ್ಲ. ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಹಿಟ್ ಗಳಿವೆ. ಇವತ್ತಿಗೂ ಬಹುನಿರೀಕ್ಷಿತ ಚಿತ್ರಗಳಿಗೆಲ್ಲಾ ಹರಿಕೃಷ್ಣ ಅವರೇ ಸಂಗೀತ ನಿರ್ದೇಶಕರು.
ವಾರಪೂರ್ತಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಸದ್ಯದ ಜನಪ್ರಿಯ ಸಂಗೀತ ನಿರ್ದೇಶಕರೆಂದರೆ ಅದು ಹರಿಕೃಷ್ಣ ಮಾತ್ರ. ಇದನ್ನು ಎಲ್ಲರೂ ಒಪ್ಪಿಕೊಳ್ಳುವ ವಿಚಾರ. ಆದರೆ ಹಂಸಲೇಖ ಕುಳಿತು ಹೋದ ಸೀಟಿನಲ್ಲಿ ಪ್ರಸ್ತುತ ಇರುವ ಸಂಗೀತ ನಿರ್ದೇಶಕರನ್ನು ಹೋಲಿಸುವುದು ಸರಿಯಾದ ವಿಚಾರವೇ ಎನ್ನುವುದು.
ಯಾಕೆಂದರೆ ಹಂಸಲೇಖ ಬರೀ ಸಂಗೀತ ನಿರ್ದೇಶಕರಲ್ಲ. ಅವರ ಹಾಡಿನಲ್ಲಿ ಕಂಗೊಳಿಸುತ್ತಿದ್ದ ಸಾಹಿತ್ಯದ ಸಾಲುಗಳಲ್ಲಿ ಇಣುಕುತ್ತಿದ್ದದ್ದು ಅವರ ವಿದ್ವತ್. ಸಾಹಿತ್ಯವನ್ನು ತಾವೇ ರಚಿಸಿಕೊಂಡು ಅದಕ್ಕೆ ತಾನೇ ಸಂಗೀತ ಸಂಯೋಜಿಸುತ್ತಾ ಜೊತೆಗೆ ಆ ಹಾಡುಗಳ ಅತ್ಯಂತ ಜನಪ್ರಿಯವಾಗುವಂತೆ ನೋಡಿಕೊಂಡ ಗಾರುಡಿಗ ಹಂಸಲೇಖಾ.
ಅವರ ಸಂಗೀತದ ಮಾಧುರ್ಯದಷ್ಟೇ ಅವರ ಸಾಹಿತ್ಯವೂ ಅಧ್ಯಯನಕ್ಕೆ ಯೋಗ್ಯವಾದುದ್ದು. ಹಾಗಾಗಿ ಹಂಸಲೇಖಾ ಅವರ ಸ್ಥಾನವನ್ನು ಹರಿಕೃಷ್ಣ ಅವರು ತುಂಬುತ್ತಾರೆ ಅಂದದ್ದು ಬಹುತೇಕರಿಗೆ ಇಷ್ಟವಾಗದೆಯೂ ಇರಬಹುದು. ಹಾಡಿನ ಜನಪ್ರಿಯತೆ ವಿಚಾರದಲ್ಲಿ ಹೋಲಿಕೆ ಮಾಡುವುದಾದರೆ ಧೀರ ರಾಕ್ ಲೈನ್ ವೆಂಕಟೇಶ್ ಅವರ ಹೇಳಿಕೆಗೆ ಒಂದಷ್ಟು ಸಮ್ಮತಿಯೂ ಸಿಕ್ಕಿದರೂ ಸಿಗಬಹುದು