Thursday, February 1, 2018

ಕುವೆಂಪು ಬಗ್ಗೆ..

೧೯೯೭-೯೮ ರ ದಿನಗಳು. ಪ್ರತಿ ಗುರುವಾರ ಸಂಜೆ ೭-೭:೩೦ ರ ನಡುವೆ ಅಪ್ಪಿ ತಪ್ಪಿ ಟಿವಿ ಹಚ್ಚಿದರೆ, ಕೆಂಪುಹಂಚು ಮೇಲಿರುವ ಅಲ್ಯೂಮಿನಿಯಂ ಕೊಳವೆ ಸಳಿಗಳು ಎಳೆದು ತಂದ ತರಂಗದಿಂದ, ಟಿವಿಯಲ್ಲಿ ಕೇವಲ ಮಳೆಯ ಸದ್ದು. ಮಳೆಯ ಹನಿಗಳ ನಡುವೆ ಮಾತಿಗಿಂತ ಮೌನವೇ ಹೆಚ್ಚು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಅನ್ನುವ ಧಾರಾವಾಹಿ. ನಿಜವಾಗಿಯೂ ಅದೊಂದು ದೃಶ್ಯಕಾವ್ಯ. ಕಡು ಕತ್ತಲೆಯಲ್ಲಿ ಆ ಸರಣಿ ನೋಡಲೇಬೇಕು!

ಆ ಹೆಗ್ಗಡೆ ವಂಶ, ಚಿನ್ನಮ್ಮ, ಮುಕುಂದಯ್ಯ ಎಲ್ಲವೂ ನೆನಪಿದೆ. ನಮ್ಮ "ಅಭಿನಯ ಚಕ್ರವರ್ತಿ" ದತ್ತಣ್ಣ ಇದ್ದರೆ ಕೇಳಬೆಕೇ?? ಪಕ್ಕಾ ಅದು ಕುವೆಂಪು ಅವರದೇ ಧಾರಾವಾಹಿ ಅನ್ನೋದು ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕೊಡುಗೆ. ಜ್ಞಾನಪೀಠ ಎನ್ನುವುದು ಏನೋ ಒಂದು ದೊಡ್ಡ ಪ್ರಶಸ್ತಿ ಇದೆ, ಅದನ್ನ ಮೊದಲು ಕನ್ನಡಕ್ಕೆ ಅಂತ ಕೊಟ್ಟಿದ್ದು ಕುವೆಂಪು ಅವರಿಗೆ ಅಂತ ನಮ್ಮ ಟೀಚರ್ ತಲೆ ಕುಟ್ಟಿ ಹೇಳಿದ್ದರು. ಆ ವಯಸ್ಸಿಗೆ ನಾನಿರುವ ಬಯಲುಸೀಮೆಯನ್ನ ಅಕ್ಷರಶಃ ಮಲೆನಾಡು ಮಾಡಿದ್ದು ಆ ಧಾರಾವಾಹಿ. ಆ ನಂತರ ಆ ತರಹದ, ಹೆಚ್ಚು ಮಾತುಗಳೇ ಇಲ್ಲದ ಹಾಗೂ ಕೇವಲ ಮಳೆಯ ಶಬ್ದ ಕೇಳುವ ಚಿತ್ರ ಎಂದರೆ ಸೌಂದರ್ಯ ನಟಿಸಿದ ದ್ವೀಪ!!

ಕುವೆಂಪು ನಿಜವಾಗಲೂ ಕಾಡುವ ವ್ಯಕ್ತಿತ್ವ. ಜ್ಞಾನಪೀಠಿಗಳಲ್ಲಿ ಅವರು ಮಾತ್ರ ನಿಜವಾದ ಜಾತ್ಯತೀತ ವ್ಯಕ್ತಿ. ನಂತರದ ಬೇಂದ್ರೆ, ಕಾರಂತರು, ಮಾಸ್ತಿ, ಗೋಕಾಕರಲ್ಲಿ ಕೇವಲ ಅದ್ಭುತ ಸಾಹಿತ್ಯ.. ಇವರಲ್ಲಿ ಸಮಾಜವಾದ, ಜಾತ್ಯತೀತತೆ ಇವೆನ್ನೇಲ್ಲ ಹುಡುಕಬೇಡಿ.

ಯಾವಾಗ 'ಸಂಸ್ಕಾರ' ವಂತರಿಗೆ, ದೇವರ ಮೂರ್ತಿಯ ಮೇಲೆ ಉಚ್ಚೆ ಹೊಯ್ಯುವ ಸಮಗ್ರ ಸಾಹಿತ್ಯಕ್ಕೇಲ್ಲ ಪ್ರಶಸ್ತಿ ಕೊಡಲು ಶುರು ಮಾಡಿದರೋ ಆಗ ಬರೀ ಕುವೆಂಪು ಮಾತ್ರ ಉಳಿದರು. ಉಳಿದ ಎಲ್ಲವೂ ಶ್ರೀ ರಾಮಾಯಣ ದರ್ಶನಂ!!!

Thursday, November 2, 2017

ನವಂಬರ್ ೧ ಮಾತ್ರ ರಾಜ್ಯೋತ್ಸವವಾ!??

ಥೂ... ಕನ್ನಡ ರಾಜ್ಯೋತ್ಸವದ ದಿನಕ್ಕೆ ಇನ್ನೊಂದು ಗಂಟೆ ಬಾಕಿ ಇದೆ. ಕನ್ನಡ, ಕನ್ನಡ ಅಂತ ಕೂಗೋರು, ಮೆಟ್ರೊ ಅಲ್ಲಿ ಕನ್ನಡ ಇಲ್ಲ ಅಂತ ಬೊಗಳೋರು, ಅರಿಶಿಣ, ಕುಂಕುಮ ಕೂಡ ನಾಚುವ ಹಾಗೇ ತಮ್ಮ ಡಿಪಿ ಹಾಕೋಳೋರು... ಥೂ...

ಒಂದು ಒಳ್ಳೆಯ ಪೆನ್ನು ಮತ್ತು ಒಂದು ಪೇಪರ್ ಕೊಟ್ಟರೆ ಸ್ವಚ್ಚ ಕನ್ನಡದಲ್ಲಿ ತಮ್ಮ ಹೆಸರನ್ನು ತಾವೇ ಬರೆಯಲೂ ಕೂಡ ಬಾರದವರೂ ಕೂಡ ಕನ್ನಡ ರಕ್ಷಕರು. ಇವರ ರಕ್ಷಣೆಗೆ ಬೆಂಕಿ ಹಾಕ...

ನಾನು ಹನ್ನೆರಡು ವರ್ಷ ಸಂಸ್ಕೃತ ಮಾಧ್ಯಮದಲ್ಲಿ ಓದಿದವನು.. ಈಗಲೂ ನನಗೆ ನೆನೆಪು ಅಂತ ಇರುವುದು ಕೇವಲ ೧೦% ಸಂಸ್ಕೃತ. ಯಾರೇ ಬರಲಿ, ಕುವೆಂಪುಯಿಂದ ಕಂಬಾರರವರೆಗೆ.. ಯಾರೇ ಬರೆಯಲಿ, ಅ ಯಿಂದ ಜ್ಞ ವರೆಗೆ... ನಾನು ಓದಬಲ್ಲೆ. ಅರ್ಥ ಮಾಡಿಕೊಳ್ಳಬಲ್ಲೆ. ಅಕ್ಷರವೇ ಬರದ ಮೂಢನಿಗೆ ಮತ್ತು ಅವನಿಗೆ ಮಾತ್ರ ಅರ್ಥ ಆಗುವ "ಭಾಷೆ"ಯಲ್ಲಿ ಹೇಳಬಲ್ಲೆ.

ಕನ್ನಡ ಒಂದು ಮಾಯಾವಿ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಬೇರೆ ಬೇರೆ ಕನ್ನಡ ಇದೆ. ಜಿಲ್ಲೆಯ ಪ್ರತಿ ತಾಲೂಕುಗಳಲ್ಲೂ ಬೇರೆ ಬೇರೆ ಕನ್ನಡ ಇದೆ. ಉತ್ತರಪ್ರದೇಶದಲ್ಲಿ ಹುಟ್ಟಿದ, "ಬಿಜೆಪಿ" ಹಾಗೂ "ಮೋದಿ"ಯನ್ನು ಅದ್ಭುತವಾಗಿ ಬಯ್ಯುತ್ತಾನೆ ಅಂತ ರಾಮಚಂದ್ರ ಗುಹಾ ಎನ್ನುವ ಉಲುಕೋಚಿಗೆ, ರಾಜ್ಯೋತ್ಸವ ಪ್ರಶಸ್ತಿ ಕೊಡುವ "ಸಿದ್ಧರಾಮಯ್ಯ"ನ ಭಾಷೆಗಿಂತ ನಮ್ಮ ಕನ್ನಡ ಶುದ್ಧವಾಗಿದೆ.

ಇದು ಈ ಕನ್ನಡದ ತಾಕತ್ತು. ಪ್ರತಿ ನೂರು ಕಿಲೋಮೀಟರುಗೆ "ಇದು ಕನ್ನಡವಾ!!?" ಅಂತ ಕೇಳುವ ರಕ್ಷಕರಿಗೇನು ಗೊತ್ತು ಕನ್ನಡದ ಹಿರಿಮೆ???

Monday, October 30, 2017

ಸಾವು...

ನರಮನುಷ್ಯ ಅತೀ ಭಯ ಪಡುವ, ಅಧೀರನಾಗುವ, ಪತುರುಗುಟ್ಟಿಹೋಗುವ ಸಮಯ ಅಂದರೆ ಅದು ಸಾವು.. ಅದು ಅವನದೇ ಸಾವಲ್ಲ.. ಅವನದೇ ಸಾವನ್ನ ಸ್ವತಃ ಅವನು ಊಹೆ ಕೂಡ ಮಾಡಿರುವುದಿಲ್ಲ. ಅಲ್ಲಿ ಜೊತೆಗೇ ಸಾಯುವ ಇನ್ನೊಂದು ಅಂದರೆ, ಆ ದೇಹವನ್ನ, ಜೀವವನ್ನ ನಂಬಿರುವ, ಪ್ರೀತಿಸಿರುವ, ಆಧಾರವಾಗಿ ಇಟ್ಟುಕೊಂಡಿರುವ ಇನ್ನೊಂದು ಜೀವ ಹಾಗೂ ಜೀವಗಳು.

ತಂದೆ ಸತ್ತರೆ ಹೆಂಡತಿ ಮತ್ತು ಮಕ್ಕಳು! ತಾಯಿ ಸತ್ತರೆ, ಮಕ್ಕಳು ಮತ್ತು ಗಂಡ! ಮಕ್ಕಳು ಸತ್ತರೆ ಅಪ್ಪ ಮತ್ತು ಅಮ್ಮ! ಹೀಗೆಯೇ.. ಪಟ್ಟಿ ಮಾಡುತ್ತಾ ಹೋದರೆ ಸಾವು ಎಲ್ಲರನ್ನೂ ಕಾಡುತ್ತದೆ. ಸಾವನ್ನು ನಮ್ಮ ಸ್ಮೃತಿಪಟಲದಿಂದ ದೂರ ಮಾಡುವ ಶಕ್ತಿ ಇರುವುದು ಸಮಯಕ್ಕೊಂದೆ.

ಆ ಸಾವನ್ನ ಕುಟುಂಬ, ದುಡ್ಡು, ಅಧಿಕಾರ, ಜನಬೆಂಬಲ.. ಊಹೂಂ.. ಯಾವುದರರಿಂದಲೂ ತಡೆಯಲು ಅಸಾಧ್ಯ. ಯಾವ ರಾಜನನ್ನೂ, ಯಾವ ಧಣಿಯನ್ನೂ ಸಾವು ಬಿಟ್ಟಿಲ್ಲ.

ನಾವು ನಂಬಿರುವ, ಪ್ರೀತಿಸಿರುವ ಎಲ್ಲರ ಸಾವಿಗೂ ನಾವು ಮುಂಚೆಯೇ ಅಣಿಯಾಗಿರಬೇಕು. ನಮ್ಮ ಸಾವನ್ನೂ ಕೂಡ ನಮ್ಮನ್ನು ನಂಬಿರುವವರು ನೋಡಿ ಕೈಕಟ್ಟಿ ಕೂರದ ಹಾಗೇ ನಾವು ಬೆಳೆದಿರಬೇಕು.

ನಮ್ಮ ಎರಡೂ ಕೈಯಿಂದ ಸಾವನ್ನ ಸ್ವಾಗತಿಸುವ 'ಶಕ್ತಿ' ಎಲ್ಲರಿಗೂ ಇರಲೇಬೇಕು...

Thursday, October 26, 2017

No double ride please...!!!

ನೋಡಿ.. ಇವರೇನೇ ಮಾಡಲಿ.. ದುಡ್ಡಿನ ವಾಸನೆ ಮಾತ್ರ ಮೂಗಿಗೆ ಬಡಿಯುತ್ತೆ. ನೂರು ಸಿಸಿಕಿಂತ ಕಡಿಮೆ ಇರುವ ಗಾಡಿಗಳಲ್ಲಿ ಡಬಲ್ ಸವಾರಿ ಬೇಡವೇ ಬೇಡ ಅನ್ನುವ ಹಿಂದೆ ಒಂದು ದೊಡ್ಡ ಕಿಕ್ ಬ್ಯಾಕ್ ಇದ್ದೇ ಇರುತ್ತೆ. ಇವರು ಎರಡು ವಾರ ಮಾತ್ರ ಹೆಲ್ಮೆಟ್ ಕಡ್ಡಾಯ ಮಾಡಲಿಲ್ಲವೇ!?? ಹಾಗೇ...

ಸರಕಾರಿ ಗೋಧಾಮುಗಳಲ್ಲಿ ಟನ್'ಗಟ್ಟಲೇ ಗೋಧಿ ಕೊಳೆತು ಬಿದ್ದಿದೆ. ಯಾವ ಪಡಿತರ ಚೀಟಿಗೂ ಇವರು ಈ ಹಿಂದೆ ಗೋಧಿ ಕೊಟ್ಟಿಲ್ಲ. (ಯಾವ ಭಾಗ್ಯದ ಸ್ಕೀಮ್ ಅಲ್ಲೂ ಜನರಿಗೆ ಗೋಧಿ ಸಿಕ್ಕಿಲ್ಲ). ಹಾಗಾದರೆ ಪೋಗಸ್ತಾಗಿ ಶೇಖರಣೆ ಮಾಡಿದ್ದೇಕೇ!?? ಅದನ್ನು ಕೊಳೆಯೊದಕ್ಕೆ ಬಿಟ್ಟಿದ್ದೇಕೇ!?

ಒಂದು ಐಟಿ ರೈಡ್ ಆದರೆ ಬಾಯಿ ಬಾಯಿ ಬಡೆದು ಕೊಳ್ಳುವ ಈ 'ಸದಾ ಸಿದ್ಧ ಸರಕಾರ'ದ ನಾಯಕರ ಆರ್ತನಾದವ ನೀವು ಕೇಳಿಲ್ಲವೇ??

ಜಾತಿ ನೋಡಿ ಮೊಟ್ಟೆ ಕೊಡುವ, ಬಸ್ ಪಾಸ್ ಕೊಡುವ, ಲ್ಯಾಪ್ ಟಾಪ್ ಕೊಡುವ, ಗುಡ್ಡ ಹತ್ತುವ ಯುವಕರಿಗೆ 'ಟ್ರೇಕಿಂಗ್ ಕಿಟ್' ಕೊಡುವ, ಹಾಲು ಕರೆದು ಕೊಂಡು ಮಾರಲು ಬರುವ ರೈತರ ಜಾತಿ ನೋಡುವ, ಸರಕಾರಕ್ಕೊಂದು ಧಿಕ್ಕಾರ!!!!!

Wednesday, October 18, 2017

ಸಿಂಗೀತಂ ಶ್ರೀನಿವಾಸ್ ರಾವ್!!!

೧೯೭೦ ರಲ್ಲಿ ಅನಂತಮೂರ್ತಿ ತಮ್ಮದೇ ಒಂದು ಕಾದಂಬರಿಯನ್ನ ಸಿನಿಮಾ ಮಾಡಲೇಬೇಕು ಅಂತ ಅನಿಸಿದಾಗ ಪಟ್ಟಾಭಿರಾಮ್ ಒಂದು ಶ್ರೇಷ್ಠ ಅಯ್ಕೆ ಅಂತ ಅನ್ನಿಸಿತ್ತೋ, ಇಲ್ಲವೋ ಗೊತ್ತಿಲ್ಲ. "ಸಂಸ್ಕಾರ" ಅನ್ನುವ ಟಿಪಿಕಲ್ ಸಬ್ಜೆಕ್ಟ್ ಕೂಡ ಸಂಸ್ಕಾರವಂತರಿಂದಲೇ ಆಗಬೇಕು ಅನ್ನೊದು ಒಳಗುಟ್ಟು. ಚಿತ್ರಕಥೆಯ ಕಾರ್ಡ್ ಅಲ್ಲಿ ಕಾರ್ನಾಡರ ಹೆಸರು ಹೇಗೆ ಬಂತು ಅನ್ನೊದು ನನಗಿನ್ನೂ ಅನುಮಾನ. ಸ್ವತಃ ಮೂರ್ತಿಗೆ ಈ ವಿಷಯದಲ್ಲಿ, ತಮ್ಮ ಮೇಲೆ ತಮಗೇ ನಂಬಿಕೆ ಇರಲಿಲ್ಲ. ಅಲ್ಲಿ ಪಟ್ಟಾಭಿರಾಮ್ ಒಂದು ನೆಪ ಅಷ್ಟೆ. ಹಿಂದೆ ಇದ್ದಿದ್ದು ಸಿಂಗೀತಂ ಶ್ರೀನಿವಾಸ್ ರಾವ್.

ಇವತ್ತಿಗೂ ನಾನು ಇಷ್ಟಾತೀ ಇಷ್ಟ ಪಡುವ ಚಿತ್ರಕರ್ಮಿ ಈ ರಾವ್. ಅವರು ಒಬ್ಬ ಎಕ್ಸ್'ಪರಿಮೆಂಟಲ್ ವ್ಯಕ್ತಿ. ಆಂಧ್ರದ ಈ ವ್ಯಕ್ತಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಅವರ ರಾಜ್ಯದಲ್ಲಿ ಅದೆಷ್ಟೋ ಬಿರುದು, ಪ್ರಶಸ್ತಿ, ಪೋಷಾಕು ಸಿಕ್ಕರೂ ಕನ್ನಡಿಗರ ಚಪ್ಪಾಳೆ ಎಂದರೆ ಅವರಿಗೆ ದೀಪಾವಳಿಯ ಗುಲಾಬ್ ಜಾಮೂನು!! (ಈಗಿನ ರಾಜಮೌಳಿ ಥರ☺️). ಡಾ:ರಾಜಕುಮಾರ್ ಎಂಬ ಮೇರು ನಟನನ್ನ ಅವರು ಕಂಡ ಹಾಗೇ ಬಹುಶಃ ಯಾರೂ ಊಹೆ ಕೂಡ ಮಾಡಿಲ್ಲ ಅನ್ನಿಸುತ್ತೆ. ಹಾಲುಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರಗಳನ್ನ ಎಂದಿಗೂ ಔಟ್'ಡೇಟ್ ಕೂಡ ಆಗದ ಹಾಗೇ ನಿರ್ಮಿಸಿಬಿಟ್ಟರು.

ಸಿಂಗೀತಂ, ಎಂದಿಗೂ ಪೌರಾಣಿಕ ಚಿತ್ರಗಳಿಗೆ ಅಂಟಿಕೊಂಡವರಲ್ಲ. ಏನಿದ್ದರೂ ಪಕ್ಕಾ ಪ್ರಾಕ್ಟಿಕಲ್ ಸ್ಟೋರಿ. ಉತ್ಮಮ ಸಂಭಾಷಣೆಕಾರರಾಗಿಯೂ "ಪುಷ್ಪಕ ವಿಮಾನ" ಎಂಬ ಮೂಕಿ ಚಿತ್ರ ನಿರ್ಮಿಸಿ ಭೇಷ್ ಅನಿಸಿಕೊಂಡವರು. ರಾಜಕುಮಾರ್ ಜೊತೆಗೆ ಅವರ ಮೂರೂ ಮಕ್ಕಳ ಚಿತ್ರ ನಿರ್ದೇಶಿಸಿದ ಏಕೈಕ ವ್ಯಕ್ತಿ ಎಂದರೆ ಸಿಂಗೀತಂ ಶ್ರೀನಿವಾಸ್ ರಾವ್.

ಅಭೇರಿ, ಸಿಂಧು ಭೈರವಿ, ಕಾಫಿ, ಕಲ್ಯಾಣಿ, ಪಹಾಡ್ ರಾಗಗಳನ್ನು ಮನೆದೇವರಂತೆ ಪೂಜಿಸುತ್ತಿದ್ದ ಸಾಲೂರು ರಾಜೇಶ್ವರರಾವ್ ಅವರ ಅಭಿಮಾನಿ ಆಗಿದ್ದಕ್ಕೋ ಏನೋ, "ಇನ್ನೂ ಹತ್ತಿರ, ಹತ್ತಿರ ಬರುವೆಯಾ??" ಅಂತ ರೊಮ್ಯಾಂಟಿಕ್ ಸ್ಟೈಲ್ ಅಲ್ಲಿ ಹಾಡುಗಳನ್ನೂ ರಚಿಸುತ್ತಿದ್ದ ಭೂಪ! ಅವರನ್ನು ಇಷ್ಟಪಡಲು ಇನ್ನೂ ಒಂದು ಕಾರಣವಿದೆ. ನನ್ನ ಫೇವರಿಟ್ ಅಂದಕಾಲತ್ತಿಲ್ ಮಾಧವಿಯನ್ನ (😍) ಭಾಗ್ಯದ ಲಕ್ಷ್ಮಿ ಬಾರಮ್ಮ ಸಿನಿಮಾದಲ್ಲಿ ದಂತದ ಗೊಂಬೆಯಂತೆ ತೋರಿಸಿರುವ ಪರಿ!!

ಯಾವ ಕವಿಯೂ ಬರೆಯಲಾರ...
ಒಲವಿನಿಂದ...
ಕಣ್ಣೋಟದಿಂದ...
ಹೃದಯದಲ್ಲಿ ನೀನು ಬರೆದ ಈ ಪ್ರೇಮಗೀತೆಯ...
ಯಾವ ಕವಿಯೂ ಬರೆಯಲಾರ...!!!

Thursday, July 13, 2017

ಏಕ ರೂಪ ತೆರಿಗೆ ಓಕೆ.. ಟ್ರೋಲ್ ಯಾಕೆ!!?

ಜುಲೈ ೧ ರ ಆಚೆ, ಈಚೆ ಹದಿನೈದು ದಿನಗಳಾದವು. ಜಿ.ಎಸ್.ಟಿ ಮೇಲಿನ ಜೋಕುಗಳು, ಟ್ರೋಲ್'ಗಳು, ಖುದ್ದು ಮೋದಿ ಬಂದು ಇವರ ಮೈ ಮೇಲೆ ಬರೆ ಎಳೆದಿದಾನೇನೋ ಎಂಬಂತಹ ನಾಟಕಗಳು ಇನ್ನೂ ನಿಂತಿಲ್ಲ. ಜೊತೆಗೆ ತಿಂಡಿ ಊಟದ ಮೇಲೂ ಟ್ಯಾಕ್ಸ್ ಆಹ್.. ಎಂಬಂತಹ ವೀಡಿಯೊಗಳು..

ಈ ಮುಂಚೆ ಇದ್ದ ಎಲ್ಲಾ ತೆರಿಗೆ ನಿಯಮಗಳು ಇವರಿಗೆ ಗೊತ್ತಿತ್ತಾ.. ಇಲ್ಲ. ಆದರೂ ಇವರ ತೆವಲು ಇನ್ನೂ ನಿಂತಿಲ್ಲ.

ಹೌದು ಸ್ವಾಮಿ, ಪಂಚರ್ ಹಾಕುವ ಒಬ್ಬ ವ್ಯಕ್ತಿ ಎಂ.ಟಿ.ಆರ್ ಅಲ್ಲೋ, ಮಯ್ಯಾಸ್ ಅಲ್ಲೋ ₹65 ಕೊಟ್ಟು ದೋಸೆ ತಿಂದರೆ ಟ್ಯಾಕ್ಸ್ ಕಟ್ಟಬೇಕು.

ಯಾಕೆ ಅಂತಹ ವ್ಯಕ್ತಿ ದೋಸೆ ತಿನ್ನಬಾರದಾ ಎಂಬ ಶುದ್ಧ ತರಲೆ ಪ್ರಶ್ನೆ ಕೇಳಬೇಡಿ. ಅವನೇನು ಪ್ರತಿದಿನವೂ ತಿನ್ನಲ್ಲ. ಯಾರಾದರೂ ದುಡ್ಡು ಕೊಟ್ಟು ಹಿಂಗೆ ಮಾಡು ಅಂತ ಹೇಳಿದಾಗ ಮಾತ್ರ ಹಾಗೇ ಮಾಡಬಲ್ಲ.

ಏಕ ರೂಪ ತೆರಿಗೆ ಅನ್ನೋದೇ ಒಂದು ಸಿಂಪಲ್ ಆಗಿರೋ ಕಾನ್ಸೆಪ್ಟ್. ಅದರಲ್ಲಿ ಸುಮಾರು ಲಕ್ಷದಷ್ಟು ವಸ್ತುಗಳ, ಸೇವೆಗಳ ತೆರಿಗೆ ನೀತಿ ಇದೆ. ನೂರಾರು ಆರ್ಥಿಕ ತಜ್ಞರು, ಸಾವಿರಾರು ಗಂಟೆಗಳ ಮೀಟಿಂಗ್ ಮಾಡಿ, ಎಲ್ಲವನ್ನೂ ತುಂಬ ಕಷ್ಟಪಟ್ಟು, ಕಾಳಜಿಯಿಂದ ತಯಾರಿಸಿದ್ದಾರೆ. ಅದನ್ನೂ ಅಪಹಾಸ್ಯ ಮಾಡುವುದು ಅಕ್ಷರಶಃ ತಪ್ಪು.

ಇದೇ ಸರಕಾರ ಮುಂಚೆ ೦.೫% ಕೃಷಿ ಕಲ್ಯಾಣ ಸೆಸ್ ಹಾಕಿದಾಗ ಸುಮ್ಮನೇ ಕೂರದೆ ಅಪಹಾಸ್ಯ ಮಾಡಿದವರು, ಇನ್ನು ಏಕ ರೂಪ ತೆರಿಗೆಗೆ ಸುಮ್ಮನಿರುತ್ತಾರೇಯೇ!??

Thursday, March 23, 2017

ಮಾರ್ಚ್ ತಿಂಗಳ ಈ ಮೂರು ವಿಷಯಗಳು.

ತಾಂತ್ರಿಕ ಶಿಕ್ಷಣ ಪಧ್ಧತಿಯಲ್ಲಿರುವ ಪ್ರತಿಯೊಬ್ಬ ಉಪನ್ಯಾಸಕನಿಗೂ ಒಂದು ಕನಸು ಎಂದರೆ ಅದು ಪಿ ಎಚ್ ಡಿ ಮತ್ತು ಅದಕ್ಕೆ ಸಹಾಯಕ ಆಗುವ ಕೆಲವು ಸಣ್ಣ ವರ್ಕ್ ಶಾಪ್ ಗಳು ಹಾಗೂ ಕೆಲವು ಜಾಗತಿಕ ಗುರುತುಗಳು. ಇನ್ನೂ ಯುಗಾದಿ ಬಂದಿಲ್ಲ ಆದರೂ ಈ ತಿಂಗಳು ನನಗೆ ಹಬ್ಬ. ಆ ಹಬ್ಬಕ್ಕೆ ನನಗೆ ಇವೆ ಮೂರು ಕಾರಣಗಳು.

ಒಂದು ನನ್ನ ಅಡಿಯಲ್ಲಿ ಬಿ ಇ ಓದುವ ನಾಲ್ಕು ಹುಡುಗರು ಸೇರಿ ನಗರ ಪಟ್ಟಣಗಳಲ್ಲಿ ಉಪಯೋಗಿಸಿ ಬಿಸಾಕಿದ 40 ಮೈಕ್ರಾನ್ ಪ್ಲಾಸ್ಟಿಕ್ ಬ್ಯಾಗ್ ಅನ್ನು ಕರಿ ಡಾಂಬರು ಜೊತೆಗೆ ಕರಗಿಸಿ ಒಂದು ಸಣ್ಣ ರೋಡ್ ಮಾಡೆಲ್ ಮಾಡುವ ಪ್ರಯತ್ನ. ಕರ್ನಾಟಕ ಸರಕಾರ ಈ ಪ್ರಯತ್ನ ಗುರುತಿಸಿ 6500 ರುಪಾಯಿ ಅಷ್ಟು ಹಣ ಬಿಡುಗಡೆ ಮಾಡಿದೆ.

ಎರಡನೇಯದು, ಬರೆದು ಬಂದ ಪ್ರವೇಶ ಪರೀಕ್ಷೆಯಲ್ಲೂ ಪಾಸಾಗಿ, ಸಂದರ್ಶನದಲ್ಲೂ ಪಾಸಾಗಿ ಈಗ ನನ್ನ ಕೈ ಸೇರಿರುವ ವಿಶ್ವವಿದ್ಯಾಲಯಕ್ಕೆ ಪಿ ಎಚ್ ಡಿ ಗೆ ಪ್ರವೇಶ ಪಡೆಯುವ ಪತ್ರ.

ಮೂರನೇ ವಿಷಯದೇ ಒಂದು ವಿಶೇಷ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಲ್ಲಿ ಒಂದು ವಾರದ ಸುಮಾರು ಹತ್ತು ಸಾವಿರ ಬೆಲೆ ಬಾಳುವ ವರ್ಕ್ ಶಾಪ್. ಅದೂ ಸಂಪೂರ್ಣ ಉಚಿತ.

ಇದೇ ಮೂರು ಕಾರಣಗಳು ನನ್ನ ಈ ಬರಹಕ್ಕೆ. ಅಷ್ಟೇ.